ಕಾಣಿಕೆ ಹುಂಡಿಗೆ ಪತ್ರ ಬರೆದು ಹಾಕಿದ ಭಕ್ತ; ಅಷ್ಟಕ್ಕೂ ಪತ್ರದಲ್ಲಿ ಬರೆದಿದ್ದು!?
ಭಕ್ತರು ತಮಗೆ ಕಷ್ಟ ಎದುರಾದಾಗ, ಖುಷಿಯಾದಾಗ ಭಕ್ತರ ಮೊರೆ ಹೋಗೋದು ಸಾಮಾನ್ಯ. ಕಷ್ಟಗಳನ್ನು ಪರಿಹರಿಸು ಎಂದು ಹರಕೆಗಳನ್ನು ಕೊಡುವುದಾಗಿಯೂ ನೆನೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಕಡೆ ಭಕ್ತರು ಪತ್ರ ಬರೆದು ಹುಂಡಿಗೆ ಹಾಕುವಂತಹ ವಿಚಿತ್ರ ಪದ್ಧತಿ ನಡೆದಿದೆ.
ಹೌದು. ನನಗೆ ಮಾಟ ಮಂತ್ರ ಮಾಡಿಸಿದವರಿಗೆ ಶಿಕ್ಷೆ ನೀಡಿದರೆ 50,001 ರೂ. ಕಾಣಿಕೆ ನೀಡುವುದಾಗಿ ಭಕ್ತನೊಬ್ಬ ಬೆಳಗಾವಿಯ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿಗೆ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ.
ಈ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಭಕ್ತರು ಹಣದ ಜೊತೆ ಚಿತ್ರ ವಿಚಿತ್ರ ಬೇಡಿಕೆಗಳನ್ನು ಮಂಡಿಸಿ ಬರೆದ ಪತ್ರಗಳು ಪತ್ತೆಯಾಗಿವೆ. ಪತ್ರವನ್ನು ಹುಂಡಿಗೆ ಹಾಕಿದರೆ ದೇವಿ ಕೋರಿಕೆ ಈಡೇರಿಸುತ್ತಾಳೆಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಬೇಡಿಕೆಯನ್ನು ಪತ್ರದ ಮೂಲಕ ದೇವಿ ಮುಂದಿಟ್ಟಿದ್ದಾರೆ. ಭಕ್ತರ ಈ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದಿ ಶಾಕ್ ಆಗಿದ್ದಾರೆ.
ಏಳು ಕೊಳ್ಳದ ಯಲ್ಲಮ್ಮದೇವಿಗೆ ಹಣದ ಅಮಿಷವೂಡ್ಡಿದ್ದ ಭಕ್ತನೊಬ್ಬ ನನಗೆ ಮಾಟ ಮಂತ್ರ ಮಾಡಿಸಿದವರಿಗೆ ಶಿಕ್ಷೆ ನೀಡಿದರೆ 50,001 ರೂ. ಕಾಣಿಕೆ ನೀಡುವುದಾಗಿ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. ನನ್ನ ವ್ಯವಹಾರಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಸಾಲಗಾರರ ಕಾಟ ಶುರುವಾಗಿದೆ ಎಂದಿದ್ದಾನೆ. ಆನ್ ಲೈನ್ ಗೇಮ್ ನಲ್ಲಿ ಕಳೆದುಕೊಂಡ ಹಣ ಮರಳಿ ಬರುವಂತೆ ಮಾಡು ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆನ್ ಲೈನ್ ಗೇಮ್ ಆಡಲು ಮನಸ್ಸು ಬರದಂತೆ ಮಾಡು ಎಂದು ಮನವಿ ಮಾಡಿಕೊಳ್ಳಲಾಗಿದೆ. ಮರಾಠಿ ಭಾಷೆಯಲ್ಲೂ ಭಕ್ತರು ದೇವಿ ಹುಂಡಿಗೆ ಪತ್ರ ಹಾಕಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
40 ದಿನಗಳ ಕಾಲ ಸಂಗ್ರಹವಿದ್ದ ಹುಂಡಿ ಕಾರ್ಯ ದೇವಸ್ಥಾನ ಆವರಣದಲ್ಲಿ ಎರಡು ದಿನ ನಡೆದಿತ್ತು. ಹುಂಡಿಯಲ್ಲಿ 40 ದಿನದಲ್ಲಿ 1.13ಕೋಟಿ ರೂ. ನಗದು ಸಂಗ್ರಹವಾಗಿದೆ. 22ಲಕ್ಷ ರೂ. ಮೌಲ್ಯದ ಬಂಗಾರ, 3.86ಲಕ್ಷ ರೂ ಮೌಲ್ಯದ ಬೆಳ್ಳಿ ಪತ್ತೆಯಾಗಿದೆ ಎಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.