ಕ್ರಿಕೆಟ್ ಪಂದ್ಯದಲ್ಲಿ ಔಟ್ ಮಾಡಿದ್ದಕ್ಕೆ ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿದ CSK ಆಟಗಾರ !!

ಕ್ರಿಕೆಟ್ ಆಟದಲ್ಲಿ ಬ್ಯಾಟರ್ ಔಟ್ ಆದಾಗ ಕೋಪಗೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಆಟಗಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಿತಿಮೀರಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಔಟ್ ಆದದ್ದಕ್ಕೆ ಕೋಪಗೊಂಡು ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿರುವ ಘಟನೆ ನಡೆದಿದೆ.

ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್) ಆರನೇ ಆವೃತ್ತಿ ಆರಂಭಗೊಂಡಿದ್ದು, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವೆ ಟೂರ್ನಿಯ ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ತಂಡದ ಆಟಗಾರ ಎನ್.ಜಗದೀಶನ್ ನೆಲ್ಲೈ ರಾಯಲ್ ಕಿಂಗ್ಸ್ ಬೌಲರ್ ಬಾಬಾ ಅಪರಾಜಿತ್ ಮಂಕಡ್ ಮೂಲಕ ಔಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ಅನುಚಿತ ವರ್ತನೆ ತೋರಿದ್ದಾರೆ.

ಎನ್. ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 25 ರನ್ (15 ಎಸೆತ, 4 ಬೌಂಡರಿ) ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ದಾಳಿಗಿಳಿದ ಬಾಬಾ ಅಪರಾಜಿತ್ ಮಂಕಡ್ ರನ್ ಔಟ್ ಮೂಲಕ ಜಗದೀಶನ್‍ರನ್ನು ಔಟ್ ಮಾಡಿದರು. ಇದರಿಂದ ತೀವ್ರ ಬೇಸರಕ್ಕೊಳಗಾದ ಜಗದೀಶನ್ ಡಗೌಟ್‍ಗೆ ತೆರಳುವ ಮುನ್ನ ಬೌಲರ್‌ಗೆ ಮಧ್ಯದ ಬೆರಳನ್ನು ತೋರಿಸಿ ಹತಾಶೆಯಿಂದ ಹೊರ ನಡೆದರು.

ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಆದರೂ ಮಂಕಡ್ ರನ್ ಔಟ್‍ನಿಂದಾಗಿ ಹತಾಶರಾದ ಜಗದೀಶನ್ ಮೈದಾನದಲ್ಲೇ ದುರ್ವತನೆ ತೋರಿದ್ದಾರೆ. ಈ ವರ್ತನೆಗೆ ಕಂಡ ಕ್ರಿಕೆಟ್ ಪ್ರೇಮಿಗಳು ಕಿಡಿಕಾರುತ್ತಿದ್ದು, ಸಮಾಜಿಕ ಜಾಲತಾಣದಲ್ಲಿ ಜಗದೀಶನ್ ವಿರುದ್ಧ ಹರಿಹಾಯ್ದಿದ್ದಾರೆ.

ಈ ಪ್ರಸಂಗದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜಗದೀಶನ್, ನಿನ್ನೆಯ ಪಂದ್ಯದಲ್ಲಿ ನನ್ನ ವರ್ತನೆಯಿಂದ ನಿಮಗೆಲ್ಲರಿಗೂ ಬೇಸರವಾಗಿರಬಹುದು. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಯಾವಾಗಲೂ ಕ್ರಿಕೆಟ್‍ಗಾಗಿ ಬದುಕುತ್ತೇನೆ. ನನಗೆ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಗೌರವವಿದೆ. ಆದರೆ ನಿನ್ನಯ ಪಂದ್ಯದಲ್ಲಿ ನಡೆದ ಆ ಘಟನೆಯಿಂದ ಕೋಪಗೊಂಡು ಈ ರೀತಿ ವರ್ತಿಸಿದ್ದೇನೆ ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ.

ಎನ್. ಜಗದೀಶನ್ ಐಪಿಎಲ್‍ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದು, 15ನೇ ಆವೃತ್ತಿ ಐಪಿಎಲ್‍ನಲ್ಲಿ ಕೆಲ ಪಂದ್ಯಗಳಲ್ಲಿ ಜಗದೀಶನ್ ಆರಂಭಿಕರಾಗಿ ಕಣಕ್ಕಿಳಿದ್ದಿದ್ದರು.

Leave A Reply

Your email address will not be published.