ಇಲ್ಲಿದೆ ದುಬಾರಿ ಬೆಲೆಯ ತಲೆದಿಂಬು!! ವಿಶ್ವದಲ್ಲೇ ಮೊದಲ ಪ್ರಯತ್ನ -15 ವರ್ಷಗಳ ಶ್ರಮ

ಆಧುನಿಕ ಕಾಲಘಟ್ಟದಲ್ಲಿ ಎಲ್ಲದರಲ್ಲಿಯೂ ವಿಶೇಷತೆ ಹಾಗೂ ವಿಭಿನ್ನ ಶೈಲಿ ಹುಡುಕುವ ಮಂದಿಯೇ ಹೆಚ್ಚು. ದಿನಬಳಕೆಯ ವಸ್ತುಗಳಿಂದ ಹಿಡಿದು, ಖರೀದಿಸುವ ಸೊಪ್ಪು ತರಕಾರಿಯಲ್ಲಿಯೂ, ವಾಹನ-ಬಟ್ಟೆ ಬರೆಗಳಲ್ಲಿಯೂ ಬೇರೆ ಬೇರೆ ವಿಶೇಷತೆ ಬಯಸುವ ತವಕದಲ್ಲಿ ಹೆಚ್ಚು ಹಣ ವ್ಯಯಿಸುತ್ತಿರುವುದು ವಾಸ್ತವ.

 

ಅಂತೆಯೇ ಇಲ್ಲೊಂದು ಕಡೆಯಲ್ಲಿ ತಲೆ ದಿಂಬಿಗೆ ಬರೋಬ್ಬರಿ 45ಲಕ್ಷ ಹಣ ಖರ್ಚು ಮಾಡಲಾಗಿದೆಯಂತೆ. ಸಾಕಷ್ಟು ಸಂಶೋಧನೆ, ಹಲವು ವರ್ಷಗಳ ಅವಿರತ ಪ್ರಯತ್ನದಿಂದ ಈ ದಿಂಬು ಹೊಸ ವಿನ್ಯಾಸ ಪಡೆದು ದುಬಾರಿಯಾಗಿದೆ. ನೆದರ್ ಲೆಂಡ್ ನ ಭೌತ ಚಿಕಿತ್ಸಕರೊಬ್ಬರು ನಿರ್ಮಿಸಿದ ಈ ದಿಂಬು ವಿಶ್ವದಲ್ಲೇ ಅತ್ಯಂತ ದುಬಾರಿಯಾಗುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ನೀಲಮಣಿ, ವಜ್ರ ಹಾಗೂ ಚಿನ್ನದಿಂದ ಅಲಂಕೃತಗೊಂಡಿರುವ ಈ ದಿಂಬಿನ ಜಿಪ್ ಗಳಲ್ಲಿಯೂ ವಜ್ರದ ಲೋಹಗಳನ್ನು ಇರಿಸಲಾಗಿದ್ದು, ಕುಬೇರನ ಮನೆತನದಲ್ಲಿಯೂ ಇಲ್ಲದ ಇಂತಹ ದುಬಾರಿ ಬೆಲೆಯ ದಿಂಬಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ತಲೆ ದಿಂಬಿಗೂ ಇಷ್ಟು ಹಣ ಖರ್ಚು ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಿರುವುದಂತೂ ಸತ್ಯ.

Leave A Reply

Your email address will not be published.