ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ
ಒಂದೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಂಪತ್ತು ಭಾರಿ ಏರಿಕೆ ಕಂಡಿದೆ. ಈ ಕುರಿತು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ. 2021ರಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ.ಗೆ ಏರಿಕೆ ಕಂಡಿದೆ. 2020ರಲ್ಲಿ ಸ್ವಿಸ್ಬ್ಯಾಂಕ್ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂಪಾಯಿಗಳಷ್ಟಿತ್ತು. ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ಅದು ಶೇಕಡಾ 50ರಷ್ಟು ಹೆಚ್ಚಿದೆ.
ಸ್ವಿಸ್ ಬ್ಯಾಂಕ್ ಈ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ, ನರೇಂದ್ರ ಮೋದಿಯ ಮೇಲೆ ಕೆಲವು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಗೇಲಿ ಮಾಡುತ್ತಿವೆ. ” ಬ್ಲಾಕ್ ಮನಿ ತಗೊಂಡು ಬರ್ತೀನಿ ಅಂದ್ರಿ, ಈಗ ನೋಡಿದ್ರೆ ನಿಮ್ಮ ಪೀರಿಯಡ್ ನಲ್ಲೇ ಅದು ಡಬಲ್ ಆಗಿದೆ. ಅದೂ ಒಂದೇ ವರ್ಷದಲ್ಲಿ !” ಎಂದು ರಾಹುಲ್ ಗಾಂಧಿಯಾಗಿ ಕೆಲವರು ಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ಸ್ವಿಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲ್ಪಟ್ಟ ಸಂಪತ್ತು ಬ್ಲಾಕ್ ಮನಿ ಹೌದ, ಅಲ್ಲವಾ ಎನ್ನುವುದು ಇವತ್ತಿನ ಜಿಜ್ಞಾಸೆ.
ಸತತ ಎರಡನೇ ವರ್ಷ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಸಂಪತ್ತು ಹೆಚ್ಚಾಗಿದೆ ಕಳೆದ ಒಂದು ವರ್ಷದಲ್ಲಿ ಅದು ಡಬಲ್ ಆಗಿದೆ. ನಿಜ. ಗ್ರಾಹಕರ ಠೇವಣಿಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ನಂತರ ಮರು ವರ್ಷ 2021ರಲ್ಲಿ ಅದು ಗಣನೀಯ ಏರಿಕೆ ಕಂಡಿದೆ.
ಭಾರತೀಯ ಗ್ರಾಹಕರ- ವ್ಯಕ್ತಿಗಳು, ಬ್ಯಾಂಕ್ಗಳು ಮತ್ತು ಉದ್ಯಮಗಳ ಠೇವಣಿಗಳನ್ನು ಒಳಗೊಂಡಂತೆ ಸ್ವಿಸ್ ಬ್ಯಾಂಕ್ಗಳಲ್ಲಿನ ಭಾರತೀಯ ಗ್ರಾಹಕರ ಎಲ್ಲಾ ರೀತಿಯ ಹಣವನ್ನು ಪರಿಗಣಿಸುತ್ತದೆ. ಭಾರತದಲ್ಲಿ ನೆಲೆಗೊಂಡಿರುವ ಸ್ವಿಸ್ ಬ್ಯಾಂಕ್ಗಳ ಶಾಖೆಗಳನ್ನು ಸಹ ಒಳಗೊಂಡಿದೆ. ಒಂದು ಬಾರಿ ಸ್ವಿಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ ತಕ್ಷಣ ಅದನ್ನು ಬ್ಲಾಕ್ ಮನಿ ಅನ್ನುವುದು ಹಾಸ್ಯಾಸ್ಪದ.
ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಈಗಾಗಲೇ ಅದನ್ನು ಸ್ಪಷ್ಟಪಡಿಸಿದ್ದು ಭಾರತದ ಕಪ್ಪು ಹಣ ತಡೆಯ ಮತ್ತು ಅಕ್ರಮ ಹಣ ವರ್ಗಾವಣೆಯ ವಿಷಯದಲ್ಲಿ ನಮ್ಮ ಸಹಕಾರ ಎಂದೆಂದಿಗೂ ಇದೆ ಎನ್ನುತ್ತಿದ್ದಾರೆ. ಅಲ್ಲದೆ ಈಗ ನೀಡಲಾಗಿರುವ ಸ್ಟ್ರೀಟ್ ಬ್ಯಾಂಕಿನಲ್ಲಿ ಭಾರತೀಯರ ಹಣ ಹೆಚ್ಚಳವು ಕಪ್ಪು ಹಣ ಅಲ್ಲ ಎಂದು ಸ್ಪಷ್ಟಪಡಿಸಿದೆ. ನಿಜಕ್ಕೂ ಇದು ಮೊದಲನೇ ಸಲ, ವಾರ್ಷಿಕವಾಗಿ ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಭಾರತೀಯರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಭಾರತ ಸರಕಾರದ ಮೇಲೆ ಸ್ವಿಸ್ ಬ್ಯಾಂಕ್ ಸಹಕರಿಸಿದ ರೀತಿ. ಏನೇ ಘಟನಾವಳಿಗಳು ಘಟಿಸಿದರೂ ಅದಕ್ಕೆ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಟೀಕಿಸುವ ಮಂದಿಗೆ ಹೊಸ ವಸ್ತು ಸಿಕ್ಕಿದೆ. ಮೋದಿ ಟೈಮ್ ನಲ್ಲಿ ಬ್ಲಾಕ್ ಮನಿ ಹೆಚ್ಚಾಗಿದೆ ಎಂಬ ಅಪಪ್ರಚಾರ ನಡೀತಿದೆ.