ಹಳ್ಳದಲ್ಲಿ ಪತ್ತೆಯಾಯ್ತು ಡಬ್ಬಗಳಲ್ಲಿ ಹಾಕಿ ಎಸೆದಿದ್ದ ಏಳು ಭ್ರೂಣ!

Share the Article

ಬೆಳಗಾವಿ :ಯಾರೋ ದುಷ್ಕರ್ಮಿಗಳು ಭ್ರೂಣಲಿಂಗ ಪತ್ತೆ ಮಾಡಿ ಬಳಿಕ ಹತ್ಯೆಗೈದು ಐದು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿ ಹಳ್ಳಕ್ಕೆ ಎಸೆದ ಘಟನೆ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.

ಭ್ರೂಣ ಲಿಂಗ ಪತ್ತೆ ವಿರುದ್ಧ ಇಷ್ಟೊಂದು ಕಠಿಣ ನಿಯಮ ಜಾರಿಯಲ್ಲಿ ಇದ್ದರೂ, ಈ ನಡುವೆಯೇ ಏಳು ಭ್ರೂಣಲಿಂಗಗಳು ಪತ್ತೆಯಾಗಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಆರೋಗ್ಯಾಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇನ್ನು ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ, ‘ಮೂಡಲಗಿ ಪಟ್ಟಣದ ಸೇತುವೆ ಕೆಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಪಂಚಾಯಿತಿ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗುವುದು. ಇಂದು ಬೆಳಗ್ಗೆ 10.30ಕ್ಕೆ ನಮಗೆ ಗೊತ್ತಾದ ಮೇಲೆ ಸಿಬ್ಬಂದಿ ಕಳಿಸಿದ್ದೇನೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಎಂದು ಹೇಳಬಹುದು’ ಎಂದಿದ್ದಾರೆ.

‘ಫೋಟೋ ನೋಡಿದಾಗ ಪತ್ತೆಯಾದ ಭ್ರೂಣಗಳು ಐದು ತಿಂಗಳು ತುಂಬಿದ ಹಾಗೇ ಕಾಣುತ್ತಿದ್ದು, ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ನಡೆಸಲಾಗುವುದು. ಇದನ್ನು ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ತನಿಖೆ ಮಾಡಲಾಗುವುದು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಒಂದು ತನಿಖಾ ತಂಡ ರಚನೆ ಮಾಡ್ತೇವೆ’ ಎಂದು ತಿಳಿಸಿದ್ದಾರೆ.

Leave A Reply