ಮಹಾಶಕ್ತಿಯಂತಿರುವ ರಾಷ್ಟ್ರೀಯ ಪಕ್ಷವೊಂದು ನಮ್ಮ ಬೆಂಬಲಕ್ಕಿದೆ- ಶಿವಸೇನೆ ನಾಯಕ ಏಕನಾಥ್ ಶಿಂಧೆ
ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ವಿರುದ್ಧದ ಬಂಡಾಯವೆದ್ದ ಶಾಸಕರು, ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಪತನದ ಅಂಚಿಗೆ ತಳ್ಳಿದ್ದಾರೆ. ಬಂಡಾಯ ಪಾಳಯದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ಪತನ ಸಮೀಪವಾಗುತ್ತಿದೆ.
ಏಕನಾಥ್ ಶಿಂಧೆ ಅವರು ಗುವಾಹಟಿಯ ಹೋಟೆಲ್ ನಲ್ಲಿ ಬಂಡಾಯ ಶಿವಸೇನಾ ಶಾಸಕರ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಮುಂಬೈನಲ್ಲಿರುವ ಅವರ ಕಚೇರಿ ಬಿಡುಗಡೆ ಮಾಡಿದೆ.
ನಮ್ಮ ಚಿಂತೆ ಮತ್ತು ಸಂತೋಷ ಒಂದೇ. ನಾವು ಒಗ್ಗಟ್ಟಾಗಿದ್ದೇವೆ ಮತ್ತು ಗೆಲುವು ನಮ್ಮದೇ ಆಗಿರುತ್ತದೆ. ಮಹಾಶಕ್ತಿಯಂತಿರುವ ರಾಷ್ಟ್ರೀಯ ಪಕ್ಷವೊಂದು, ಪಾಕಿಸ್ತಾನವನ್ನು ಸೋಲಿಸಿದ ಪಕ್ಷವೊಂದು ನಾವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದೆ, ಮತ್ತು ಎಲ್ಲಾ ಸಹಾಯವನ್ನು ಒದಗಿಸುವ ಭರವಸೆ ನೀಡಿದೆ ಎಂದು ಶಿಂಧೆ ಹೇಳಿದರು.
ಶಿಂಧೆ ಪ್ರಸ್ತುತ ಸೇನೆಯ 37 ಬಂಡಾಯ ಶಾಸಕರು ಮತ್ತು ಒಂಬತ್ತು ಸ್ವತಂತ್ರ ಶಾಸಕರೊಂದಿಗೆ ಗುವಾಹಟಿಯಲ್ಲಿದ್ದಾರೆ.
ತಮ್ಮ ಬಂಡಾಯವನ್ನು ‘ರಾಷ್ಟ್ರೀಯ ಪಕ್ಷ’ವೊಂದು ‘ಐತಿಹಾಸಿಕ’ ಎಂದು ಬಣ್ಣಿಸಿದೆ ಮತ್ತು ಅವರಿಗೆ ಎಲ್ಲಾ ಸಹಾಯ ಒದಗಿಸುವ ಭರವಸೆ ನೀಡಿದೆ ಎಂದು ಹೇಳಿದರು.
ಶಾಸಕರು ತಮ್ಮ ಗುಂಪಿನ ನಾಯಕರಾಗಿ ತಮ್ಮ ಪರವಾಗಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಶಿಂಧೆ ಅವರಿಗೆ ಸರ್ವಾನುಮತದಿಂದ ಅಧಿಕಾರ ನೀಡಿದ್ದಾರೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ.