ಇಂದು ಒಲಂಪಿಕ್ ದಿನ, ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ !
ಒಲಂಪಿಕ್ ಕ್ರೀಡೆಗಳೆಂದರೆ ಎಲ್ಲರಲ್ಲೂ ಒಂದು ಕೌತುಕ ಒಂದು ಕುತೂಹಲ ಇದ್ದೇ ಇರುತ್ತದೆ. ಎಲ್ಲಾ ದೇಶದ ಮಧ್ಯೆ ನಡೆಯೋ ಒಂದು ಕುತೂಹಲಕಾರಿ ಪಂದ್ಯ ಇದಾಗಿರುತ್ತದೆ. ಅಂತರಾಷ್ಟ್ರೀಯ ಪಂದ್ಯವಾದ ಈ ಒಲಂಪಿಕ್ ಕ್ರೀಡೆಯ ಮಹತ್ವ, ವಿಶೇಷತೆ ಏನು? ಇದರ ಆಚರಣೆ ಯಾವಾಗ? ಬನ್ನಿ ತಿಳಿಯೋಣ.
ಜೂನ್ 23 ರಂದು( ಇಂದು ) ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಒಲಿಂಪಿಕ್ ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದು. ಸಾವಿರಾರು ವರ್ಷಗಳ ಇತಿಹಾಸವಿರುವ ಕ್ರೀಡಾಕೂಟ ಇದಾಗಿದೆ. ಈ ಒಲಂಪಿಕ್ ಕ್ರೀಡಾಕೂಟ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇದೊಂದು ಅಂತರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಈ ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಫಿಟ್ನೆಸ್ ಮತ್ತು ಸ್ಪೋರ್ಟ್ಸ್ ಗಾಗಿ ಮೀಸಲಿಡಲಾಗಿದೆ. ಈ ಕ್ರೀಡಾಕೂಟವನ್ನು ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವೆಂದು ವಿಂಗಡನೆ ಮಾಡಲಾಗಿದೆ. 1992 ರ ತನಕ ಈ ಕ್ರೀಡಾಕೂಟಗಳು ಒಂದೇ ವರ್ಷದಲ್ಲಿ ನಡೆಯುತ್ತಿದ್ದವು. ಈಗ ಈ ಕ್ರೀಡಾಕೂಟಗಳ ನಡುವೆ ಎರಡು ವರ್ಷಗಳ ಅಂತರ ಇರುತ್ತದೆ.
ಒಲಿಂಪಿಕ್ ಕ್ರೀಡಾಕೂಟದ ಮೂಲ ಗ್ರೀಸ್ ದೇಶ. ಸುಮಾರು ಕ್ರಿ.ಪೂ.776ರಲ್ಲಿ ಗ್ರೀಸ್ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಮುರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡಲಾಗುತ್ತಿತ್ತು. ಅನಂತರ ಕ್ರಮೇಣ ಈ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು. ನಂತರ ಮತ್ತೇ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ ಇವಾಂಜೆಲಾಸ್ ಝಪ್ಪಾನ್ ಎಂಬಾತ ಪ್ರಪ್ರಥಮವಾಗಿ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. ಬಳಿಕ 1894ರಲ್ಲಿ ಫ್ರಾನ್ಸ್ನ ಪಿಯರೆ ಡಿ ಕ್ಯೂಬರ್ತಿನ್ ಎಂಬುವವನು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. 1896 ರಲ್ಲಿ ಪ್ರಥಮ
ಬಾರಿಗೆ ಗ್ರೀಸ್ನ ಈಗಿನ ರಾಜಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವಾಗಿದೆ.
ಮೊದಲ ಅಂತರಾಷ್ಟ್ರೀಯ ಒಲಂಪಿಕ್ ದಿನವನ್ನು ಜೂನ್ 23, 1948 ರಂದು ಆಚರಿಸಲಾಯಿತು. ಇದರಲ್ಲಿ ಪೋರ್ಚಗಲ್, ಗ್ರೀಸ್, ಆಸ್ಟ್ರೀಯಾ, ಕೆನಡಾ, ಸ್ವಿಟ್ಜರ್ಲೆಂಡ್, ಗ್ರೇಟ್ ಬ್ರಿಟನ್, ಉರುಗೈ, ವೆನೆಜುವೆಲಾ, ಮತ್ತು ಬೆಲ್ಲಿಯಂ ಸೇರಿ ಒಟ್ಟು ಒಂಬತ್ತು ದೇಶಗಳು ಮೊದಲ ಬಾರಿಗೆ ಈ ಒಲಿಂಪಿಕ್ ದಿನಾಚರಣೆಯಲ್ಲಿ ಭಾಗವಹಿಸಿದ್ದವು.
ನೀವು ಗಮನಿಸಿರುವ ಹಾಗೇ, ಬಿಳಿಬಣ್ಣದ ಒಲಿಂಪಿಕ್ ಧ್ವಜದಲ್ಲಿ ಐದು ವರ್ತುಲಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಐದು ವರ್ತುಲಗಳು ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು ಬಣ್ಣಗಳಿಂದ ಕೂಡಿರುತ್ತವೆ. ಈ ಐದು ವರ್ತುಲಗಳು ಜಗತ್ತಿನ ಐದು ಜನವಸತಿಯುಳ್ಳ ಭೂಖಂಡ (ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್ ಮತ್ತು ಅಮೆರಿಕಾ)ಗಳನ್ನು ಪ್ರತಿನಿಧಿಸುತ್ತವೆ (ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ).
ಒಲಂಪಿಕ್ ರಿಂಗ್ ಗಳ ವೈಶಿಷ್ಟ್ಯತೆ ಸುರುಳಿಯಾಕಾರದಲ್ಲಿರುವ ಐದು ರಿಂಗ್ಗಳಲ್ಲೂ ವೈಶಿಷ್ಟ್ಯತೆ ಅಡಗಿದೆ. ಇವು 5 ಖಂಡಗಳನ್ನು ಪ್ರತಿನಿದಿಸುತ್ತವೆ. ಆಧುನಿಕ ಒಲಂಪಿಕ್ಸ್ ಪಿತಾಮಹಾ ಫ್ರಾನ್ಸ್ನ ಪಿ.ಡಿ.ಕೌಬರ್ಟಿಯನ್, 1913 ರಲ್ಲಿ ಈ ಐದು ರಿಂಗುಗಳುಳ್ಳ ಒಲಂಪಿಕ್ಸ್ ಧ್ವಜವನ್ನು ವಿನ್ಯಾಸಗೊಳಿಸಿದರು. ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರ ಧ್ವಜವೂ ಈ ರಿಂಗ್ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ.
ಒಲಂಪಿಕ್ ಜ್ವಾಲೆಯು ಒಲಂಪಿಕ್ ಚಳುವಳಿಯಲ್ಲಿ ಬಳಸಲಾಗುವ ಸಂಕೇತ. ಇದು ಆಧುನಿಕ ಮತ್ತು ಪ್ರಾಚೀನ ಆಟಗಳ ನಡುವಿನ ನಿರಂತರತೆಯ ಸಂಕೇತ ಸಹ ಆಗಿದೆ. ಒಲಂಪಿಕ್ ಕ್ರೀಡಾಕೂಟಕ್ಕೆ ಹಲವು ತಿಂಗಳ ಮುಂಚೆ ಗ್ರೀಕ್ನ ಒಲಂಪಿಯಾದಲ್ಲಿ ಒಲಂಪಿಕ್ ಜ್ವಾಲೆಯನ್ನು ಬೆಳಗಿಸಲಾಗುತ್ತದೆ. ನಂತರ ಆತಿಥ್ಯ ರಾಷ್ಟ್ರದಾದ್ಯಂತ ಒಲಂಪಿಕ್ ಟಾರ್ಚ್ ರೀಲೆ ನಡೆದು ಉದ್ಘಾಟನಾ ಸಮಾರಂಭದಲ್ಲಿ ಕೊನೆಗೊಳ್ಳುತ್ತದೆ.
ಪ್ರತಿ ವರ್ಷ ಹೊಸ ಹೊಸ ಥೀಮ್ನೊಂದಿಗೆ ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ 2022 ರ ಥೀಮ್ “ಒಗ್ಗಟ್ಟಿನ ಶಾಂತಿಯುತ ಪ್ರಪಂಚ” ಎಂಬ ಥೀಮ್ನ್ನ ಇಟ್ಟುಕೊಂಡು ಆಚರಣೆ ಮಾಡಲು ನಿರ್ಧರಿಸಲಾಗಿದೆ. ವಿವಿಧ ಸ್ವಭಾವದ ಜನರನ್ನು ಕ್ರೀಡಾ ಮನೋಭಾವದಿಂದ ಒಟ್ಟುಗೂಡಿಸುವುದು ಕ್ರೀಡೆಯ ಶಕ್ತಿ ಎಂಬ ದೃಷ್ಟಿಯಿಂದ ಈ ಥೀಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಥೀಮ್ ಜನರಲ್ಲಿನ ಒಗ್ಗಟ್ಟು, ಸುಸ್ಥಿರತೆ, ಶಾಂತಿಯಂತಹ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ.
ಭಾರತ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಬಾರಿ
ಭಾಗವಹಿಸಿದ್ದು, 900ರ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ. ರಜೆ ಕಳೆಯಲೆಂದು ಪ್ಯಾರಿಸ್ ಗೆ ತೆರಳಿದ್ದ ಆಂಗ್ಲೋ ಇಂಡಿಯನ್ ಅಫೀಟ್ ನಾರ್ಮನ್ ಪಿಚರ್ಡ್ ಅವರು ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಬಳಿಕ 1920ರಲ್ಲಿ ಬೆಲ್ಡಿಯಂನ ಎಂಟ್ವರ್ಪ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ 1924ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎಂಟು ಮಂದಿಯ ತಂಡ ಭಾಗವಹಿಸಿತ್ತು. 1928ರಲ್ಲಿ ನೆದರ್ಲೆಂಡ್ನ ಆಮ್ಸ್ಟರ್ಡಂ ಒಲಿಂಪಿಕ್ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಿಂಪಿಕ್ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು.