ತನ್ನ ಸ್ವಂತ 25 ಲಕ್ಷ ರೂ. ಹಣದಲ್ಲಿ ರಾಮಮಂದಿರ ಕಟ್ಟಿಸಿದ ಮುಸ್ಲಿಂ ವ್ಯಕ್ತಿ !!
ದೇಶದಲ್ಲಿ ಎಷ್ಟೇ ಕೋಮು ಸಂಘರ್ಷಗಳು ನಡೆಯುತ್ತಿದ್ದರೂ ಕೆಲವು ಕಡೆಗಳಲ್ಲಿ ಕೋಮು ಸೌಹಾರ್ದತೆಯ ಘಟನೆಗಳು ನಡೆಯುತ್ತಿರುತ್ತದೆ. ಅಂತೆಯೇ ಇಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಗ್ರಾಮದಲ್ಲಿ 25 ಲಕ್ಷ ರೂಪಾಯಿ ಖರ್ಚು ಮಾಡಿ ರಾಮ ಮಂದಿರ ಕಟ್ಟಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ.
ಖಮ್ಮಂ ಜಿಲ್ಲೆಯ ರಘುನಾಡಪಾಲಂ ಮಂಡಲದ ಬುಡಿದಂಪಾಡು ಗ್ರಾಮದ ಸರಪಂಚ್ ಶೇಕ್ ಮೀರಾ ಸಾಹೇಬ್ ದೇಣಿಗೆ ಮೂಲಕ 25 ಲಕ್ಷ ರೂ. ಸಂಗ್ರಹಿಸಿದ್ದು, ಇನ್ನು ಉಳಿದ 25 ಲಕ್ಷ ರೂಪಾಯಿ ತಾನೇ ಹಾಕಿ 50 ಲಕ್ಷ ರುಪಾಯಿಯಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ.
ಹಲವು ಮುಖಂಡರ ಪ್ರಯತ್ನಗಳು ವಿಫಲವಾದ ನಂತರ ಶೇಕ್ ಮೀರಾ ರಾಮಾಲಯವನ್ನು ನಿರ್ಮಿಸಲು ಉಪಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಮೂವರು ಬುಡಕಟ್ಟು ಸಹೋದರರಾದ ಕೆ ಬಿಚಾ, ನಂದಾ ಮತ್ತು ಕೊನ್ಯಾ ಅವರು ದೇವಾಲಯದ ನಿರ್ಮಾಣಕ್ಕಾಗಿ 1000 ಚದರ ಗಜಗಳಷ್ಟು ಭೂಮಿಯನ್ನು ದಾನ ಮಾಡಿದರು.
ಈ ಕುರಿತು ಮಾತನಾಡಿದ ಶೇಕ್ ಮೀರಾ, ತಾವು ದೇವಾಲಯ ಹಾಗೂ ಚರ್ಚ್‌ಗಳಿಗೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತೇನೆ. ನಾವು ಸಾಯುವಾಗ ನಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ, ಆದರೆ ನಮ್ಮ ಕೆಲಸವು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅನೇಕ ದೇವಾಲಯಗಳನ್ನು ಮುಸ್ಲಿಮರು ನಿರ್ಮಿಸಿದ್ದಾರೆ. ಉದಾಹರಣೆಗೆ, ಭದ್ರಾಚಲಂ ರಾಮಾಲಯವನ್ನು ನಿಜಾಮರು ನಿರ್ಮಿಸಿದರು. ಬ್ರಿಟಿಷರ ಆಡಳಿತಾವಧಿಯಲ್ಲಿ ಮಹಬೂಬಾಬಾದ್ ಜಿಲ್ಲೆಯ ಡೋರ್ನಕಲ್ ನಲ್ಲಿ ಮುಸ್ಲಿಂರೊಬ್ಬರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಚರ್ಚ್ ನಿರ್ಮಿಸಿದ್ದರು ಎಂದರು. ಶೇಕ್ ಮೀರಾ ಎರಡನೇ ಬಾರಿಗೆ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.
ಸಚಿವ ಕೆಟಿ ರಾಮರಾವ್ ಸಹ ಸಮುದಾಯಗಳನ್ನು ಒಗ್ಗೂಡಿಸುವ ಶೇಕ್ ಮೀರಾ ಅವರ ಉದಾತ್ತ ಮನಸ್ಸನ್ನು ಶ್ಲಾಘಿಸಿದ್ದಾರೆ. ಟ್ವೀಟ್‌ನಲ್ಲಿ ಸಚಿವರು, ಇದು ತೆಲಂಗಾಣ! ನಾವು ಹಂಚಿಕೊಳ್ಳಬೇಕಾದ ಕಥೆಗಳು! ತೆಲಂಗಾಣದ ಬೂದಿಡಂಪಾಡು ಗ್ರಾಮದ ಸರಪಂಚರಾದ ಶೇಖ್ ಮೀರಾ ಸಾಹೇಬ್ ಅವರು ತಮ್ಮ ಸ್ವಂತ 25 ಲಕ್ಷ ರೂ. ಹಣದಲ್ಲಿ ರಾಮಮಂದಿರವನ್ನು ನಿರ್ಮಿಸಿದ್ದಾರೆ ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.