ಈ ವರ್ಷಾಂತ್ಯದೊಳಗೆ ದೇಶಾದ್ಯಂತ ಜಾರಿಯಾಗಲಿದೆ ಸರ್ಕಾರದ ಈ ಯೋಜನೆ !! | ಸಾರ್ವಜನಿಕರಿಗೇನು ಲಾಭ ??
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಭೆಯಲ್ಲಿ ಮಹತ್ವದ ನಿರ್ಧಾರವೊಂದು ಹೊರಹೊಮ್ಮಿದೆ. ನೌಕರರ ರಾಜ್ಯ ವಿಮಾ ನಿಗಮ (ESIC), 2022 ರ ಅಂತ್ಯದ ವೇಳೆಗೆ ದೇಶಾದ್ಯಂತ ಆರೋಗ್ಯ ವಿಮಾ ಯೋಜನೆ ESI ಅನ್ನು ವಿಸ್ತರಿಸಲು ನಿರ್ಧರಿಸಿದೆ.
ಸರ್ಕಾರದ ಈ ನಿರ್ಧಾರದಿಂದ ನೌಕರ ವರ್ಗಕ್ಕೆ ಸೇರಿದ ಜನರಿಗೆ ಭಾರೀ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿದ್ದ ಜಿಲ್ಲೆಗಳಲ್ಲಿ ಈ ಯೋಜನೆಯ ಜಾರಿಗೆ ಬರುವುದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗಲಿದೆ.
PTI ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, ಪ್ರಸ್ತುತ ನೌಕರರ ರಾಜ್ಯ ವಿಮಾ (ESI) ಯೋಜನೆಯನ್ನು 443 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮತ್ತು
153 ಜಿಲ್ಲೆಗಳಲ್ಲಿ ಭಾಗಶಃ ಜಾರಿಯಾಗಿದೆ. ಒಟ್ಟು 148 ಜಿಲ್ಲೆಗಳು ಇನ್ನೂ ಇಎಸ್ಐ ಯೋಜನೆಯ ವ್ಯಾಪ್ತಿಯಲ್ಲಿಲ್ಲ.
ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಇಎಸ್ಐಸಿಯ 188ನೇ ಸಭೆಯಲ್ಲಿ, ದೇಶದಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಈ ವರ್ಷದ ಅಂತ್ಯದೊಳಗೆ ಇಡೀ ದೇಶಾದ್ಯಂತ ಪೂರ್ಣ ಪ್ರಮಾಣದ ಇಎಸ್ಐ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಇಎಸ್ಐ ಯೋಜನೆಗೆ ಭಾಗಶಃ ಒಳಪಡದ ಮತ್ತು ಇನ್ನೂ ವ್ಯಾಪ್ತಿಗೆ ಒಳಪಡದ ಎಲ್ಲಾ ಜಿಲ್ಲೆಗಳನ್ನು ಈ ಯೋಜನೆಯ ಸಂಪೂರ್ಣ ವ್ಯಾಪ್ತಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್ (ಡಿಸಿಬಿಒ)ಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಸೌಲಭ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
23 ಹೊಸ ಆಸ್ಪತ್ರೆಗಳು ಮತ್ತು 62 ಡಿಸ್ಪೆನ್ಸರಿಗಳು
ಹೊಸ ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್ (ಡಿಸಿಬಿಒ)ಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಸೌಲಭ್ಯ ಸೇವೆಗಳನ್ನು ಎಲ್ಲಾ ನೌಕರ ವರ್ಗದವರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಇಎಸ್ಐಸಿ ದೇಶಾದ್ಯಂತ 23 ಹೊಸ 100 ಹಾಸಿಗೆ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಆರು, ಹರಿಯಾಣದಲ್ಲಿ ನಾಲ್ಕು, ತಮಿಳುನಾಡು, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ ಎರಡು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎನ್ನಲಾಗಿದೆ.
ಆಂಧ್ರಪ್ರದೇಶ, ಛತ್ತೀಸ್ಗಢ, ಗೋವಾ, ಗುಜರಾತ್, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಆಸ್ಪತ್ರೆ ತೆರೆಯಲಾಗುವುದು. ಇದಲ್ಲದೇ ವಿವಿಧೆಡೆ ಕ್ಲಿನಿಕ್ ಗಳನ್ನೂ ತೆರೆಯಲಾಗುವುದು. ಈ ಆಸ್ಪತ್ರೆಗಳು ಮತ್ತು ಡಿಸ್ಪೆನ್ಸರಿಗಳು ವಿಮಾಧಾರಕ ಉದ್ಯೋಗಿಗಳಿಗೆ ಮತ್ತು ಅವರ ಮೇಲೆ ಅವಲಂಭಿಸಿದವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.