ಒಂದೇ ಕುಟುಂಬದ ಒಂಬತ್ತು ಮಂದಿ ಆತ್ಮಹತ್ಯೆ!

Share the Article

ಒಂದೇ ಕುಟುಂಬದ 9 ಮಂದಿ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮೀರಜ್ ತಾಲೂಕಿನ ನಾರ್ವಡ್​ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ವೈದ್ಯರಾಗಿರುವ ಪೋಪಟ್​ ಯಲ್ಲಪ್ಪ ವಾನ್ಮೋರ್​ (52), ಸಂಗೀತಾ ಪೋಪಟ್​ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್​ ವಾನ್ಮೋರ್​ (28), ಮನಿಕ್​ ಯಲ್ಲಪ್ಪ ವಾನ್ಮೋರ್​ (49), ರೇಖಾ ಮನಿಕ್ ವಾನ್ಮೋರ್​ (45), ಆದಿತ್ಯ ಮನಿಕ್ ವಾನ್​ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು ಅಕ್ಕತಾಯ್ ವಾನ್ಮೋರ್​ (72) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರ ಪೈಕಿ 6 ಶವ ಒಂದು ಮನೆಯಲ್ಲಿದ್ದು, ಇನ್ನು ಮೂರು ಶವ ಪಕ್ಕದ ಇನ್ನೊಂದು ಮನೆಯಲ್ಲಿ ಪತ್ತೆಯಾಗಿವೆ. ಒಟ್ಟು ಒಂಬತ್ತೂ ಮಂದಿ ವಿಷ ಸೇವಿಸಿದ್ದಾರೆ.

ಮನೆಯವರು ಇಂದು ಬೆಳಗಿನಿಂದ ಬಾಗಿಲು ತೆಗೆಯದ್ದನ್ನು ಗಮನಿಸಿದ ನೆರೆಹೊರೆಯವರು, ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ಯಾವ ಪ್ರತಿಕ್ರಿಯೆ ಬರದಿದ್ದರಿಂದ ಬಾಗಿಲು ಒಡೆದು ನೋಡಿದಾಗ ಮನೆಯೊಳಗೆ 6 ಶವಗಳು ಪತ್ತೆಯಾಗಿವೆ. ಬಳಿಕ ಅಲ್ಲೇ ಸಮೀಪದ ರಾಜಧಾನಿ ಕಾರ್ನರ್​ನ ಇನ್ನೊಂದು ಮನೆಯಲ್ಲೂ ಬೆಳಗಿನಿಂದ ಬಾಗಿಲು ತೆರೆಯದ್ದರಿಂದ ಒಡೆದು ನೋಡಿದಾಗ, ಅಲ್ಲಿ ಮೂವರ ಶವ ಪತ್ತೆಯಾಗಿದೆ.

ಈ ಕುಟುಂಬ ಸಂಬಂಧಿಕರು ಮತ್ತು ಗ್ರಾಮಸ್ಥರ ಬಳಿ ಬಹಳಷ್ಟು ಸಾಲ ಮಾಡಿದ್ದರಿಂದ ಅದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾಲ ಕೊಟ್ಟವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲು ಮೀರಜ್​ಗಾಂವ್ ಪೊಲೀಸರು ಮುಂದಾಗಿದ್ದು, ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸ್ಥಳೀಯರನ್ನು ಆಘಾತಕ್ಕೆ ಒಳಪಡಿಸಿದೆ.

Leave A Reply