ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ ಪುತ್ತೂರು ಅರಣ್ಯ ಇಲಾಖೆ
ಪುತ್ತೂರು: ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ವಲಯದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಶಿಕುಮಾರ್, ಸತೀಶ್, ವಿಜೇಶ್, ವಿನಿತ್, ಸಂಪತ್ ಕುಮಾರ್ ಮತ್ತು ರತೀಶ್.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್ ಬಳಿ ವಾಹನ ಅಡ್ಡಗಟ್ಟಿ ಎರಡು ಆನೆ ದಂತ ಮತ್ತು ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೈ.ಪಿ. ಕಾರ್ಯಪ್ಪರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಕಿರಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್.ಎನ್., ಶಿವಾನಂದ್ ಆಚಾರ್ಯ, ಪ್ರಕಾಶ್ ಬಿ.ಟಿ., ಕುಮಾರಸ್ವಾಮಿ, ಪ್ರಸಾದ್ ಕೆ.ಜೆ. ಮೆಹಬೂಬ್ರಸಾದ್, ಅರಣ್ಯ ರಕ್ಷಕರುಗಳಾದ ನಿಂಗರಾಜ್, ಸುಧೀರ್, ಸತ್ಯನ್, ದೀಪಕ್, ಉಮೇಶ್, ಇಲಾಖೆ ವಾಹನ ಚಾಲಕರಾದ ಜಗದೀಶ್ ಮತ್ತು ರೋಹಿತ್ ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು.