“ಲವ್ ಬರ್ಡ್ಸ್” ನಿಂದಾಗಿ ಕೆಲಸಕ್ಕೆ ಕುತ್ತು ತಂದ ಕಂಡಕ್ಟರ್!
ಬಸ್‌ನಲ್ಲಿ ಒಯ್ಯುತ್ತಿದ್ದ ‘ಜೋಡಿ ಹಕ್ಕಿ’ಗೆ (ಲವ್ ಬರ್ಡ್ಸ್) ಟಿಕೆಟ್ ಕೊಡದ್ದಕ್ಕೆ ಬಸ್ ಕಂಡಕ್ಟರ್ ನೌಕರಿಗೇ ಕುತ್ತು ಬಂದಿದೆ.
ಹೈದರಾಬಾದ್-ಔರಾದ್ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮನೆಯಲ್ಲಿ ಸಾಕಲು ಹೈದರಾಬಾದ್‌ನಿಂದ ಲವ್ ಬರ್ಡ್ಸ್ ತಂದಿದ್ದರು. ಬಸ್‌ನಲ್ಲಿ ಪ್ರಯಾಣಿಸುವ ಪ್ರಾಣಿ, ಪಕ್ಷಿಗೂ ಟಿಕೆಟ್ ಕೊಡಬೇಕು ಎನ್ನುವುದು ಸಾರಿಗೆ ಸಂಸ್ಥೆಯ ನಿಯಮ.
ಕಂಡಕ್ಟರ್ ಜೋಡಿ ಹಕ್ಕಿಗಳಿಗೆ ಅರ್ಧ ಟಿಕೆಟ್ ಪಡೆಯಲು ಲವ್ ಬರ್ಡ್ಸ್ ಮಾಲೀಕನಿಗೆ ಹೇಳಿದ್ದಾರೆ. ಆದರೆ, ಮಾಲೀಕ ಟಿಕೆಟ್ ಪಡೆಯಲು ಒಪ್ಪಲಿಲ್ಲ. ಆಗ ಪ್ರಯಾಣಿಕರು ಕೂಡಾ, ‘ಹಕ್ಕಿ ತೂಕವೆಷ್ಟು, ಅದು ಕೂರಲು ಎಷ್ಟು ಜಾಗ ಬೇಕು’ ಎಂದೆಲ್ಲ ಹೇಳಿ ಕಂಡಕ್ಟರ್ ಬಾಯಿ ಮುಚ್ಚಿಸಿದ್ದಾರೆ.
ಪ್ರಯಾಣಿಕರೊಂದಿಗೆ ಹೆಚ್ಚು ವಾಗ್ವಾದ ಮಾಡುವುದು ಸರಿ ಅಲ್ಲವೆಂದು ಭಾವಿಸಿ ಕಂಡಕ್ಟರ್ ಮೌನವಾದರು. ಆದರೆ, ಮಾರ್ಗ ಮಧ್ಯೆ ವಿಚಕ್ಷಕ ದಳದವರು ತಪಾಸಣೆ ನಡೆಸಿದಾಗ ಜೋಡಿ ಹಕ್ಕಿಗಳಿಗೆ ಟಿಕೆಟ್ ಕೊಡದಿರುವುದು ಗಮನಕ್ಕೆ ಬಂತು.
ವಿಚಕ್ಷಕ ದಳದವರು ನೇರವಾಗಿ ಷರಾ ಬರೆದು ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದಾರೆ. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಕಂಡಕ್ಟರ್‌ನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.
”ಜೋಡಿ ಹಕ್ಕಿಗಳಿಗೆ ತಲಾ ರೂ.114ರ ಅರ್ಧ ಟಿಕೆಟ್ ಕೊಡಬೇಕಿತ್ತು. ಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿ ಕೈಚೆಲ್ಲಿ ಕೂತೆ. ವಿಚಕ್ಷಕ ದಳದವರು ತಮ್ಮ ಕೆಲಸ ಮಾಡಿದ್ದಾರೆ. ನಾನು 24 ವರ್ಷ ಕಂಡಕ್ಟರ್ ಆಗಿ ಕೆಲಸ ಮಾಡಿದ್ದೇನೆ. ದಂಡ ವಿಧಿಸಿದ್ದರೆ ಟಿಕೆಟ್ ದರದ ದುಪ್ಪಟ್ಟು ಹಣ ಪಾವತಿಸಬಹುದಿತ್ತು. ಆದರೆ, ಸಂಸ್ಥೆಯ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ’ ಎಂದು ಕಂಡಕ್ಟರ್ ಅಶೋಕ ಹಿಲಾಲಪುರ ಬೇಸರ ವ್ಯಕ್ತಪಡಿಸಿದರು.
‘ಪ್ರಯಾಣಿಕರು ತಮ್ಮೊಂದಿಗೆ ಗಿಳಿ, ಪಾರಿವಾಳ, ಕೋಳಿ, ನಾಯಿ ಮರಿ ತಂದರೂ ಟಿಕೆಟ್ ಕೊಡಬೇಕು. ಟೆಕೆಟ್ ಪಡೆಯದ ಪ್ರಯಾಣಿಕರಿಗೆ 10 ಪಟ್ಟು ದಂಡ ವಿಧಿಸುವ ಹಾಗೂ ಕಂಡಕ್ಟರ್‌ನನ್ನು ಅಮಾನತುಗೊಳಿಸುವ ಅಧಿಕಾರ ಸಂಸ್ಥೆಗೆ ಇದೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ತಿಳಿಸಿದರು.