ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಗೆ ನಡುರಸ್ತೆಯಲ್ಲಿ ಮಸಿ ಬಳಿದ ದುಷ್ಕರ್ಮಿಗಳು !!

ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಹಾಡಹಗಲೇ ದೆಹಲಿಯ ರಸ್ತೆಯಲ್ಲಿ ಮಸಿ ಬಳಿದಿರುವ ಘಟನೆ ನಡೆದಿದೆ.

 

ಸಂತ್ರಸ್ತೆ ತನ್ನ ತಾಯಿಯೊಂದಿಗೆ ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಶಾಯಿಯ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಕೃತ್ಯ ನಡೆದ ತಕ್ಷಣ ಆಕೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದುಕೊಂಡು ಹೋಗಲಾಯಿತು. ಮೇಲ್ನೋಟಕ್ಕೆ ದುಷ್ಕರ್ಮಿಗಳು ನೀಲಿ ಬಣ್ಣದ ಶಾಯಿಯನ್ನು ಎರಚಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅದರ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮಹಿಳೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರಿಗೆ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಹಾಗೂ ಘಟನೆಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಹಿನ್ನೆಲೆ ಏನು?

ಕಳೆದ ವರ್ಷ ಜನವರಿ 8 ರಿಂದ ಈ ವರ್ಷ ಏಪ್ರಿಲ್ 17 ರ ವರೆಗೆ ರಾಜಸ್ಥಾನದ ಸಚಿವ ಮಹೇಶ್ ಜೋಶಿಯ ಪುತ್ರ ರೋಹಿತ್ ಜೋಶಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಮದುವೆಯಾಗುವುದಾಗಿ ಭರವಸೆಯನ್ನೂ ನೀಡಿದ್ದ. ಹಲವು ಬಾರಿ ಅಪಹರಣ ಹಾಗೂ ಬ್ಲ್ಯಾಕ್‌ಮೇಲ್ ಮಾಡಿರುವುದಾಗಿಯೂ ಸಂತ್ರಸ್ತೆ ಆರೋಪಿಸಿದ್ದಾಳೆ.

ಈ ಬಗ್ಗೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ತಿಂಗಳು ಪೊಲೀಸರ ತಂಡ ರೋಹಿತ್ ಜೋಶಿಯನ್ನು ಬಂಧಿಸಲು ಜೈಪುರಕ್ಕೆ ತೆರಳಿತ್ತು. ಆದರೆ ಸಚಿವರ ಪುತ್ರ ತಮ್ಮ ಮನೆಯಲ್ಲಿ ಪತ್ತೆಯಾಗಿರಲಿಲ್ಲ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಸಚಿವರ ಮಗನನ್ನು ಉಳಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.