ಮಂಗಳೂರು: ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಸಿಡಿಲು ಬಡಿದು ಸಾವು!

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

 

ಮೃತರನ್ನು ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38)ಎಂದು ಗುರುತಿಸಲಾಗಿದೆ.

ಹೈದರಾಲಿ ತನ್ನ ಸಹವರ್ತಿಗಳಾದ ಆಸಿಫ್ ಎಚ್, ಫರಾಝ್, ಇಮ್ರಾನ್, ಮತ್ತು ಅನ್ವರ್ ಅವರೊಂದಿಗೆ ನಿನ್ನೆ ಬೆಳಗ್ಗೆ 5 ಗಂಟೆಗೆ ಎ.ಎಸ್.ಎಫ್ ತವಕ್ಕಲ್ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಉಳ್ಳಾಲ ಕೋಡಿಯಿಂದ ಸಮುದ್ರಕ್ಕೆ ಸುಮಾರು 14 ಮಾರು ದೂರದಲ್ಲಿ 7.30ರ ಹೊತ್ತಿಗೆ ತಲುಪಿದ್ದು, ಬಲೆ ಬೀಸುತ್ತಿದ್ದಾಗ ಸಿಡಿಲು-ಮಿಂಚು ಆರಂಭಗೊಂಡಿತ್ತು. ಈ ವೇಳೆ ಹೈದರಾಲಿಗೆ ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದರು.

ತಕ್ಷಣ ಸಹವರ್ತಿಗಳು ಹೈದರಾಲಿಯನ್ನು ದೋಣಿಯಲ್ಲಿ ದಡಕ್ಕೆ ತಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹೈದರಾಲಿ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave A Reply

Your email address will not be published.