ವೃದ್ಧ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದದ್ದಲ್ಲದೆ, ಅಂತ್ಯಕ್ರಿಯೆ ಮಾಡಲೂ ಬಿಡದ ಗಜರಾಜ !!
ಕೋಪಗೊಂಡ ಗಜರಾಜ ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯೂ ಮಾಡಲು ಬಿಡದೆ ಶವವನ್ನು ಎತ್ತೆಸೆದ ಭಯಾನಕ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ರಾಯ್ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ.
ಮಾಯ ಮರ್ಮು ಎಂದಿನಂತೆ ಕೊಳವೆ ಬಾವಿಯಿಂದ ಗುರುವಾರ ಬೆಳಗ್ಗೆ ನೀರು ತರಲು ಹೋಗಿದ್ದು, ಮಡಿಕೆಯಲ್ಲಿ ನೀರು ತುಂಬುತ್ತಿದ್ದಾಗ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಬಂದ ಕಾಡಾನೆಯೊಂದು ಆಕೆಯ ಮೇಲೆ ದಾಳಿ ಮಾಡಿದೆ. ಹಲವಾರು ಬಾರಿ ನೆಲಕ್ಕೆ ಬಡಿದು ಕಾಲುಗಳಿಂದ ತುಳಿದು ಹಾಕಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಮನೆಯವರು ಮತ್ತು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದಾದ ಬಳಿಕ ಆಕೆಯ ಕುಟುಂಬ ಸದಸ್ಯರು ಅಂದೇ ಸಂಜೆ ಚಿತೆಯ ಮೇಲೆ ಪಾರ್ಥೀವ ಶರೀರವನ್ನು ಇಟ್ಟು ಅಂತ್ಯ ಸಂಸ್ಕಾರಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಮತ್ತೆ ಅದೇ ಆನೆ ಅಲ್ಲಿಗೆ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟು, ಚಿತೆಯ ಮೇಲಿದ್ದ ದೇಹವನ್ನು ಎತ್ತಿ ನೆಲಕ್ಕೆ ಎಸೆದು, ಕಾಲುಗಳಿಂದ ತುಳಿದು, ಮತ್ತಷ್ಟು ವಿರೂಪಗೊಳಿಸಿ, ಅಂತಿಮವಾಗಿ ತನ್ನ ಕೋರೆಗಳಿಂದ ಶವವನ್ನು ಎತ್ತಿ ಪಕ್ಕಕ್ಕೆ ಎಸೆದು ಓಡಿಹೋಗಿದೆ.
ಬಳಿಕ ಆನೆ ಹೋದ ನಂತರ ಗ್ರಾಮದ ಜನರು ಮೃತದೇಹವನ್ನು ಎತ್ತಿ ಚಿತೆಯ ಮೇಲಿಟ್ಟು ವೃದ್ಧೆಯ ಅಂತ್ಯಕ್ರಿಯೆಯನ್ನು ಅದೇ ದಿನ ಕೆಲ ಗಂಟೆಗಳ ಬಳಿಕ ನಡೆಸಿದ್ದಾರೆ. ಅಂತೂ ಆನೆಯ ಈ ವಿಚಿತ್ರ ವರ್ತನೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಸ್ಗೋವಿಂದಪುರ ಠಾಣೆಯ ಇನ್ಸ್ಪೆಕ್ಟರ್ ಲೋಪಾಮುದ್ರ ನಾಯಕ್ ತಿಳಿಸಿದ್ದಾರೆ.