ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಪ್ -1 ಡಯಾಬಿಟಿಸ್ | ರಾಜ್ಯದ ಯಾವ ಜಿಲ್ಲೆ ಮೊದಲ ಸ್ಥಾನ ಪಡೆದಿದೆ ? ಕರಾವಳಿ ಮಕ್ಕಳು ಸುರಕ್ಷಿತರೇ ?
ಟೈಪ್-1 ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದು ಕೊಂಡಿದೆ. 0-18 ವರ್ಷದೊಳಗಿನ ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್ ಹೊಂದಿರುವುದು ನಿಜಕ್ಕೂ ಆತಂಕ ಸೃಷ್ಟಿಸಿದೆ.
ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75ರಷ್ಟು ಕೇವಲ ರಾಯಚೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆಯಲ್ಲಿ 20 ಪ್ರಕರಣ ವರದಿಯಾಗಿದೆ. ಉಳಿದಂತೆ ಯಾದಗಿರಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಲಾದ ಮಕ್ಕಳಲ್ಲಿ ಪತ್ತೆಯಾಗಿಲ್ಲ.
ಇತರ ಖಾಸಗಿ ಆಸ್ಪತ್ರೆಗಳಲ್ಲಿ ರಾಜ್ಯಾದ್ಯಂತ ಸರಿಸುಮಾರು 6,366 ಮಕ್ಕಳ ಸಹಿತ 10,000 ಮಕ್ಕಳು ಈ ಖಾಯಿಲೆಗೆ ಒಳಗಾಗುತ್ತಿದ್ದಾರೆ.
ರಾಜ್ಯ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಅಂಗನ ವಾಡಿ, ಸರಕಾರಿ ಹಾಗೂ ಖಾಸಗಿ ಶಾಲೆ ಕಾಲೇಜುಗಳ 18 ವರ್ಷದೊಳಗಿನ 78.32 ಲಕ್ಷ ಮಕ್ಕಳನ್ನು ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,884 ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು.
ಆರೋಗ್ಯ ಇಲಾಖೆ ತಾಲೂಕು ಮಟ್ಟದಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ. ಈಗಾಗಲೇ ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ಸುಲಿನ್ ಹಾಗೂ ಮಧುಮೇಹ ಸಂಬಂಧಿಸಿದ ಔಷಧಗಳನ್ನು ನೀಡಲಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ತಾಲೂಕು-ಸಮುದಾಯ ಆರೋಗ್ಯ ಕೇಂದ್ರ ಗಳಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಉಚಿತವಾಗಿ ಔಷಧ ವಿತರಿಸಲು ಕ್ರಮ ಕೂಡಾ ತೆಗೆದುಕೊಳ್ಳಲಾಗಿದೆ.
ಈ ಖಾಯಿಲೆ ಉಂಟಾಗಲು ಕಾರಣ : ಮೇದ್ದೋಜೀರಕ ಗ್ರಂಥಿಯಲ್ಲಿ ಇರುವ ಬೀಟಾ ಕೋಶವು ಇನ್ಸುಲಿನ್ ಅನ್ನು ಉತ್ಪಾದಿಸುವುದು. ಟೈಪ್ 1 ಮಧುಮೇಹ ಇರುವವರಲ್ಲಿ ಬೀಟಾ ಕೋಶವು ತಮ್ಮದೇ ಆದ ಪ್ರತಿರಕ್ಷಣಾ ವ್ಯವಸ್ಥೆಯಿಂದ ನಾಶವಾಗುತ್ತದೆ. ಇದು ಸಾಕಷ್ಟು ಇನ್ಸುಲಿನ್ ಉತ್ಪಾದನೆಗೆ ಕಾರಣವಾಗುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಕೆಲವು ಸೋಂಕುಗಳು ಬೀಟಾ ಕೋಶಗಳನ್ನು ನಾಶಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ.
ಮಕ್ಕಳಲ್ಲಿ ಟೈಪ್ 1 ಮಧುಮೇಹದ ಲಕ್ಷಣಗಳು: ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆಗೆ ಪ್ರಚೋದನೆ ಪಡೆದುಕೊಳ್ಳುವುದು, ವ್ಯಾಯಾಮ ಮತ್ತು ಆಟ ಆಡದೆ ಇದ್ದರೂ ಅತಿಯಾದ ಆಯಾಸಕ್ಕೆ ಒಳಗಾಗುವುದು, ಅಸಹನೀಯವಾದ ಹಸಿವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳೊಟ್ಟಿಗೆ ಮಕ್ಕಳಲ್ಲಿ ಡಯಾಬಿಟಿಕ್ ಕೆಟೊ ಆಸಿಡೋಸಿನ್ ಎಂಬ ಸ್ಥಿತಿಯು ಬೆಳವಣಿಗೆ ಆಗುವುದು. ಆಗ ರಕ್ತದಲ್ಲಿ ಕೀಟೋನ್‌ಗಳು ನಿರ್ಮಾಣವಾಗುತ್ತವೆ. ಅದು ಮಕ್ಕಳನ್ನು ತೀವ್ರವಾಗಿ ಅಸ್ವಸ್ಥಗೊಳಿಸುವುದು.
ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ನಿರ್ವಹಿಸಲು ಮಧುಮೇಹ ತಜ್ಞ, ಪೌಷ್ಟಿಕ ತಜ್ಞ, ಮನಃಶಾಸ್ತ್ರಜ್ಞರು ಹಾಗೂ ಕುಟುಂಬದವರ ಬೆಂಬಲ ತೋರಬೇಕು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗುವುದು ಅಥವಾ ಕಡಿಮೆ ಆಗುವುದನ್ನು ತಡೆಯಬೇಕು. ಸಕ್ಕರೆ ಪ್ರಮಾಣವು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಚಟುವಟಿಕಾ ಶೀಲರಾಗಿ ಕಾರ್ಯ ನಿರ್ವಹಿಸಲು ಪ್ರಚೋದನೆ ನೀಡಬೇಕು. ಇನ್ಸುಲಿನ್ ಅನ್ನು ಚುಚ್ಚುಮದ್ದು ರೂಪದಲ್ಲಿ ನೀಡಲಾಗುವುದು. ಪ್ರಸ್ತುತ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಗ್ಲೂಕೋಮೀಟರ್ ಬಳಸಿ ಪ್ರತಿದಿನ ಪರಿಶೀಲಿಸಬೇಕು. ನಿತ್ಯದ ಆಹಾರದಲ್ಲಿ ಕಾರ್ಬೋ ಹೈಡ್ರೇಟ್ ಮಟ್ಟವನ್ನು
ತಗ್ಗಿಸಬೇಕು. ಸೂಕ್ತ ದೈಹಿಕ ಚಟುವಟಿಕೆಯನ್ನು ನಿರ್ವಹಿಸುವಂತೆ ಪ್ರಚೋದನೆ ನೀಡಬೇಕು.