ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಬಿಗ್ ಶಾಕ್!!

ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡುವವರಿಗೆ ಬಿಗ್ ಶಾಕ್ ಎದುರಾಗಿದ್ದು, ರೀಚಾರ್ಜ್ ಮಾಡಿಕೊಳ್ಳುವ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು ಆರಂಭಿಸಿದೆ.

ಹೌದು. ಇಲ್ಲಿಯವರೆಗೆ ಫೋನ್ ಪೇ ಬಳಕೆದಾರರಿಗೆ ಶುಲ್ಕ ವಿಧಿಸುತ್ತಿತ್ತು, ಇದೀಗ ಪೇಟಿಎಂ ಸದ್ದಿಲ್ಲದೇ ಅದೇ ಸಾಲಿಗೆ ಸೇರ್ಪಡೆಗೊಂಡಿದೆ. ಸರ್ಚಾರ್ಜ್ ರೂಪದಲ್ಲಿ ಪೇಟಿಎಂ ಗ್ರಾಹಕರಿಂದ 1 ರಿಂದ 6 ರೂಪಾಯಿವರೆಗೆ ಶುಲ್ಕವನ್ನು ಪಡೆಯುತ್ತಿದ್ದು, ಪೇಟಿಎಂ ಮೊಬೈಲ್ ರೀಚಾರ್ಜ್ ಗಳಿಗೆಲ್ಲವಕ್ಕೂ ಈ ಶುಲ್ಕ ಅನ್ವಯವಾಗುತ್ತಿದೆ.

ಗ್ರಾಹಕರು ತಮ್ಮ ವ್ಯಾಲೆಟ್ ಬ್ಯಾಲೆನ್ಸ್ ಅಥವಾ ಯುಪಿಐ ಅಥವಾ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೊಂದಿಗೆ ಪೇಟಿಎಂ ಮೂಲಕ ಮೊಬೈಲ್ ಅನ್ನು ರೀಚಾರ್ಜ್ ಮಾಡಿಸಿದರೂ ಈ ಶುಲ್ಕವನ್ನು ಪಾವತಿಸಲೇಬೇಕು. ಈ ಶುಲ್ಕ ವಿಧಿಸುವ ಪ್ರಕ್ರಿಯೆ ಕಳೆದ ಮಾರ್ಚ್ ತಿಂಗಳಲ್ಲೇ ಜಾರಿಗೆ ಬಂದಿದೆಯಾದರೂ ಹೆಚ್ಚಿನ ಗ್ರಾಹಕರಿಗೆ ತಿಳಿದಿರಲಿಲ್ಲ. ಏಕೆಂದರೆ, ಆರಂಭದಲ್ಲಿ ಕೆಲವೇ ಕೆಲವು ಗ್ರಾಹಕರಿಗೆ ಶುಲ್ಕ ವಿಧಿಸಿರುವುದು ಕಂಡುಬಂದಿತ್ತು. ಆದರೆ, ದಿನ ಕಳೆದಂತೆ ಎಲ್ಲಾ ಗ್ರಾಹಕರಿಗೆ ಈ ಶುಲ್ಕದ ಬಿಸಿ ತಟ್ಟಿದ್ದು, ಅವರ ಆಕ್ರೋಶಕ್ಕೆ ಗುರಿಯಾಗಿದೆ.

ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿಸಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು 2019 ರಲ್ಲಿ ಕಂಪನಿ ಘೋಷಣೆ ಮಾಡಿತ್ತು. ಆದರೆ, ಈಗ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಶುಲ್ಕ ವಿಧಿಸುತ್ತಿದೆ ಎಂದು ಬಳಕೆದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.