ಇನ್ನು ಮುಂದೆ ಕಾರು ಖರೀದಿ ಬಲು ದುಬಾರಿ !!
ಅದೆಷ್ಟೋ ಜನರಿಗೆ ಹೊಸ ಕಾರು ಖರೀದಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಇನ್ನು ಮುಂದೆ ಹೊಸ ಕಾರು ಖರೀದಿಸಬೇಕಾದರೆ ನಮ್ಮಲ್ಲಿರುವ ಬಜೆಟನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಎಲ್ಲಾ ಕಾರುಗಳು ಮತ್ತು ಬೈಕ್‌ಗಳ EMI ಇನ್ನು ಹೆಚ್ಚಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ರೇಟ್ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ವಾಹನ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಅಂದರೆ ಪ್ರತಿ ತಿಂಗಳು ಬರುವ EMI ಮೇಲೆ ಇದರ ನೇರ ಪರಿಣಾಮ ಬೀರುತ್ತದೆ. ಕಳೆದ 5 ವಾರಗಳಲ್ಲಿ ಎರಡನೇ ಬಾರಿಗೆ ಆರ್‌ಬಿಐ ರೆಪೊ ದರ ಹೆಚ್ಚಿಸಿದೆ.
ಕೇಂದ್ರ ಬ್ಯಾಂಕ್‌ನ 6 ಸದಸ್ಯರ ದರ ನಿಗದಿ ಸಮಿತಿಯು ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಅಂದರೆ ಶೇಕಡಾ 4.90 ಕ್ಕೆ ಏರಿಸುವ ಪರವಾಗಿ ಸರ್ವಾನುಮತದಿಂದ ಮತ ಹಾಕಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಮೇ ತಿಂಗಳಿನಲ್ಲಿಯೂ ಆರ್ ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ಹಣದುಬ್ಬರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಣದುಬ್ಬರದ ಪರಿಣಾಮವನ್ನು ಕಳೆದ ಪಾಲಿಸಿ ಮೀಟಿಂಗ್ ನಲ್ಲಿ ಎತ್ತಿ ತೋರಿಸಲಾಯಿತು. ಮಾತ್ರವಲ್ಲ ಸಮಯಕ್ಕಿಂತ ಮುಂಚಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರೆಪೋ ದರದಲ್ಲಿನ ಈ ಹೆಚ್ಚಳವು ಆಟೋಮೋಟಿವ್ ಉದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕೋವಿಡ್ 19 ನಂತರ ಪೂರೈಕೆ ಮತ್ತು ಸೆಮಿಕಂಡಕ್ಟರ್ ಚಿಪ್ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರವು ಥರ್ಡ್ ಪಾರ್ಟಿ ಮೋಟಾರು ವಿಮೆಯ ಬೆಲೆಯನ್ನು ಕೂಡಾ ಹೆಚ್ಚಿಸಿದೆ. ಈ ಕಾರಣದಿಂದಾಗಿ ವಾಹನ ಖರೀದಿ ಈಗಾಗಲೇ ದುಬಾರಿಯಾಗಿದೆ. ಇದೀಗ ರೆಪೋ ದರ ಹೆಚ್ಚಳ ಗ್ರಾಹಕರ ಮೇಲೆ ಮಾತ್ರವಲ್ಲ, ವಾಹನ ತಯಾರಕರ ಮೇಲೂ ನೇರ ಪರಿಣಾಮ ಬೀರಲಿದೆ. ಕೋವಿಡ್ -19 ರ ಸಮಯದಲ್ಲಿ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿಲ್ಲ.