ಮೃಗಾಲಯದಲ್ಲಿ ತೆಪ್ಪಗಿದ್ದ ಗೊರಿಲ್ಲಾವನ್ನು ರೇಗಿಸಲು ಹೋದವವನ ಫಜೀತಿಯೇ ಭಯಾನಕ!!- ವೀಡಿಯೋ ವೈರಲ್
ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನಲ್ಲ. ಅದರಲ್ಲೂ ಮನುಷ್ಯರು ಝೂನಲ್ಲಿರುವ ಪ್ರಾಣಿಗಳಿಗೆ ಕೀಟಲೆ ಕೊಡಲು ಹೋಗಿ ಫಜೀತಿಗೆ ಸಿಲುಕಿರುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ. ಕೋಪಗೊಂಡ ಗೊರಿಲ್ಲಾ ಏನು ಮಾಡಿದೆ ಗೊತ್ತಾ !?? ಹಿಂದೆ ಮುಂದೆ ನೋಡದೆ ಆತನ ಮೇಲೆ ದಾಳಿ ಮಾಡಿದೆ. ಈ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಈ ಘಟನೆ ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ನಡೆದಿದೆ. ಟ್ವಿಟ್ಟರ್ ಬಳಕೆದಾರರು ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಟೀನಾ ಎಂಬ ಗೊರಿಲ್ಲಾ ಬೋನ್‌ನಲ್ಲಿ ಇರುತ್ತೆ. ಹಸನ್ ಅರಿಫಿನ್ ಎಂದು ಗುರುತಿಸಲಾದ ವ್ಯಕ್ತಿ ಬೋನ್ ಬಳಿಗೆ ಬಂದು ಗೊರಿಲ್ಲಾವನ್ನು ರೇಗಿಸುತ್ತಾನೆ. ಪರಿಣಾಮ ಅವನ ಮೇಲೆ ದಾಳಿ ಮಾಡಲು ಗೊರಿಲ್ಲಾ ಯತ್ನಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಹಸನ್ ಪಂಜರದ ಬಳಿಗೆ ಬಂದಿದ್ದು, ಗೊರಿಲ್ಲಾವನ್ನು ರೇಗಿಸಿದ್ದಾನೆ. ಸಿಟ್ಟಿಗೆದ್ದ ಗೊರಿಲ್ಲಾ, ಹಸನ್ ಬಟ್ಟೆಯನ್ನು ಬಲವಾಗಿ ಎಳೆಯಲು ಪ್ರಾರಂಭಿಸುತ್ತದೆ. ಅವನು ಎಷ್ಟೇ ಕಷ್ಟಪಟ್ಟರು ಗೊರಿಲ್ಲಾ ಕೈಯಿಂದ ಬಟ್ಟೆಯನ್ನು ಬಿಡಿಸಿಕೊಳ್ಳಲು ಆಗಿಲ್ಲ. ಈ ವೇಳೆ ಹಸನ್ ಸ್ನೇಹಿತ ಸಹ ಬಂದಿದ್ದು, ಅವನ ಕೈಯಿಂದಲೂ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಉದ್ರೇಕಗೊಂಡ ಗೊರಿಲ್ಲಾ ತನ್ನ ಎಲ್ಲ ಶಕ್ತಿಯಿಂದ ಹಸನ್ ಕಾಲನ್ನು ಹಿಡಿದು ತನ್ನ ಕಡೆಗೆ ಎಳೆಯಲು ಪ್ರಯತ್ನಿಸುತ್ತದೆ. ಆತನ ಕಾಲನ್ನು ತನ್ನ ಬಾಯಿಗೆ ಹಾಕಿಕೊಳ್ಳಲು ಕೂಡ ಮುಂದಾಗುತ್ತದೆ. ಹಸನ್‍ಗೆ ಸಹಾಯ ಮಾಡಲು ಅವನ ಸ್ನೇಹಿತ ಗೊರಿಲ್ಲಾಗೆ ಒದೆಯಲು ಪ್ರಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಅವನಿಗೆ ಸಹಾಯ ಮಾಡುವುದಕ್ಕೆ ಬೇರೆಯವರನ್ನು ಕರೆಯುತ್ತಾನೆ. ಕೊನೆಗೆ ಗೊರಿಲ್ಲ ತನ್ನ ಕೈಬಿಟ್ಟು ಬಿಡುತ್ತದೆ.
ಮೃಗಾಲಯದ ಅಧಿಕಾರಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಝೂಕೀಪರ್ ಒಬ್ಬರು ಗೊರಿಲ್ಲಾ ಆವರಣದ ಮುಂದೆ ಅಳವಡಿಸಲಾಗಿರುವ ಎಚ್ಚರಿಕೆ ಫಲಕವನ್ನು ತೋರಿಸುತ್ತಿರುವುದು ಕಂಡುಬಂದಿದೆ.