ನಕಲಿ ವೈದ್ಯನ ಗುಟ್ಟು ರಟ್ಟು ಮಾಡಲು ಹೊರಟಿದ್ದ ಪತ್ರಕರ್ತನ ಬಂಧನಕ್ಕೆ ಕಾರಣನಾಗಿದ್ದ ಚಂದ್ರಶೇಖರ ಶೆಟ್ಟಿ ವಿರುದ್ಧ ಎಫ್ಐಆರ್

ಉಡುಪಿ ಜಿಲ್ಲೆಯಲ್ಲಿದ್ದ ನಕಲಿ ವೈದ್ಯರ ಗುಟ್ಟು ರಟ್ಟು ಮಾಡಲು ಹೊರಟ ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಕಾಳಜಿಯ ಪರ ಹೋರಾಟಗಾರನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧನಕ್ಕೆ ಕಾರಣನಾಗಿದ್ದ ನಕಲಿ ವೈದ್ಯ ಚಂದ್ರಶೇಖರ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜಿಲ್ಲೆಯ ಕಾಲ್ಲೋಡು ಮತ್ತು ಗೋಳಿಹೊಳೆಯಲ್ಲಿ ಕ್ಲಿನಿಕ್ ತೆರೆದು ನಕಲಿ ಬಿಎಂಎಸ್ ವೈದ್ಯ ಚಂದ್ರಶೇಖರ್ ಶೆಟ್ಟಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇದನ್ನು ಬಯಲಿಗೆಳೆದು, ಆತ ನೀಡುವ ಔಷಧಿಗಳನ್ನು ಬಳಸದಂತೆ ಜನರನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತ ಕಿರಣ್ ಪೂಜಾರಿ ಮಾಡಿದ್ದರು. ಆದರೆ, ಕಿರಣ್ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ಚಂದ್ರಶೇಖರ್ ಶೆಟ್ಟಿ, ರಾಜಕೀಯ ಪ್ರಭಾವ ಬಳಸಿ ಕಿರಣ್‌ರನ್ನು ಬಂಧಿಸುವಂತೆ ಮಾಡಿದ್ದರು.

ಆದರೆ ಬಂಧನಕ್ಕೊಳಗಾದ ಕಿರಣ್, ತಾವು ಕಲೆ ಹಾಕಿದ್ದ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಅವರು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ವರದಿ ನೀಡಿ, ನಕಲಿ ವೈದ್ಯ ಚಂದ್ರಶೇಖರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು.

ಆರೋಗ್ಯಾಧಿಕಾರಿಯ ಮಾಹಿತಿಯ ಮೇಲೆ ಚಂದ್ರಶೇಖರ್ ಶೆಟ್ಟಿ ವಿರುದ್ಧ ಜಿಲ್ಲಾಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಗಾಗಿ ಐವರ ತಂಡವನ್ನು ನಿಯೋಜಿಸಿದ್ದಾರೆ. ಅಲ್ಲದೆ, ಚಂದ್ರಶೇಖರ್ ಶೆಟ್ಟಿ ಮಾತ್ರವಲ್ಲದೆ, ಡಾ. ಸುರೇಶ್ ಕುಮಾರ್ ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ ಎಚ್, .ಡಾ. ಅಮ್ಮಾಜಿ, ಡಾ. ರಶ್ಮಿ ಶೆಟ್ಟಿ, ಡಾ. ಜಗದೀಶ್ ಶೆಟ್ಟಿ ಇನ್ನೂ ಹತ್ತು ನಕಲಿ ವೈದ್ಯರ ವಿರುದ್ಧವೂ ಆರೋಪಗಳಿದ್ದು, ಅವರ ವಿರುದ್ಧವೂ ಕ್ರಮಗೊಳ್ಳಲು ಸೂಚಿಸಲಾಗಿದೆ.

“ಈಗಾಗಲೇ ನಕಲಿ ವೈದ್ಯರಿಗೆ ಅಲೋಪತಿ ಔಷಧವನ್ನು ಸರಬರಾಜು ಮಾಡುತ್ತಿದ್ದ ಕೆಲವು ಔಷಧ ವಿತರಕರ ಪರವಾನಗಿಯನ್ನು ಅಮಾನತು ಮಾಡಿಲಾಗಿದೆ”ಎಂದು ಡ್ರಗ್ ಕಂಟ್ರೋಲರ್ (ಎಡಿಸಿ) ಕೆ. ವಿ. ನಾಗರಾಜ್ ತಿಳಿಸಿದ್ದಾರೆ.

Leave A Reply

Your email address will not be published.