ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಕರ್ನಾಟಕ ವಿಶ್ವವಿದ್ಯಾಲಯ
“ಬೀಜ ಬಿತ್ತೋಣ; ಅರಣ್ಯ ಬೆಳಸೋಣ” ಧೈಯದೊಂದಿಗೆ
ರಾಜ್ಯಪಾಲರಿಂದ ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ
ಧಾರವಾಡ: ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ “ಬೀಜ ಬಿತ್ತೋಣ, ಅರಣ್ಯ ಬೆಳಸೋಣ” ಎಂಬ ಧೈಯದೊಂದಿಗೆ ರಾಜ್ಯಪಾಲ ಥಾವರ್ ಚಂದ ಗೆಹ್ಲೋಥ್ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೀಜ ಬಿತ್ತನೆ ಅಭಿಯಾನ 2022 ಕ್ಕೆ ಮಂಗಳವಾರ ಚಾಲನೆ ನೀಡಿದರು.
ಬೀಜ ಬಿತ್ತನೆ ಕಾರ್ಯಕ್ರಮವನ್ನು ಹಸಿರು ಕರ್ನಾಟಕ ಯೋಜನೆಯ ಭಾಗವಾಗಿ ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಬಿತ್ತೋತ್ಸವ ಕಾರ್ಯಕ್ರಮವನ್ನು ಜೂನ್ 5 ರಿಂದ ಪ್ರಾರಂಭಿಸಲಾಗಿದೆ.
ಜೂನ್ 5 ರಿಂದ 12 ರ ವರೆಗೆ ಬಿತ್ತೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿನ 50 ಅರಣ್ಯ ವಿಭಾಗಗಳಲ್ಲಿ ಮತ್ತು 228 ವಲಯಗಳಲ್ಲಿ ಬೀಜಗಳನ್ನು ಬಿತ್ತಲು ಯೋಜನೆ ರೂಪಿಸಲಾಗಿದೆ.
ಈ ಯೋಜನೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ಎನ್.ಸಿ.ಸಿ. ವಿಭಾಗಗಳ ಮೂಲಕ ಸರಕಾರಿ ಕಚೇರಿಗಳ ಆವರಣ, ಅರಣ್ಯ ಪ್ರದೇಶ, ಖರಾಬ್ ಭೂಮಿ, ವಿವಿಧ ಸಂಘ, ಸಂಸ್ಥೆಗಳಿಗೆ ಸೇರಿದ ಪುದೇಶಗಳನ್ನು ಆಯ್ಕೆ ಮಾಡಿ ಸದರಿ ಬೀಜಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಧಾರವಾಡ ಅರಣ್ಯ ಇಲಾಖೆ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಮಾತನಾಡಿ, ಬಿತ್ತಿದಂತೆ ಬೆಳೆ ಎಂಬ ನುಡಿಯಂತೆ, ನಮ್ಮ ನಿಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ಇಂದೇ ಬೀಜ ಬಿತ್ತೋಣ ಎಂದು ಪ್ರತಿಜ್ಞೆ ಮಾಡುತ್ತಾ, ಈ ಪರಿಸರದಿಂದ ಸಾಕಷ್ಟು ಪಡೆದಂತಹ ನಾವೆಲ್ಲರೂ ಅದಕ್ಕೆ ದ್ರೋಹ ಬಗೆಯದೇ ಇರುವುದೊಂದೇ ಭೂಮಿಯನ್ನು ಸಂರಕ್ಷಿಸೋಣ. ಮತ್ತು ಅರಣ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉತ್ತಮ ಸ್ಥಿತಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ಈಗಿನ ಯುವ ಪೀಳಿಗೆಯ ಮೇಲೆ ಇದೆ ಎಂದು ಅವರು ಹೇಳಿದರು.
ಬೀಜ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಪರಿಸರಾಭಿಮಾನಿಗಳು, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿರಿ. ಎಲ್ಲರೂ ಒಂದಾಗಿ ನಮ್ಮ ನಾಡಿನ ಹಸಿರನ್ನು ಹೆಚ್ಚಿಸಿ, ಉಸಿರನ್ನು ಕಾಪಾಡೋಣ“ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಕಾರ್ಯಕ್ರಮ ಮಹೋನ್ನತ ಯಶಸ್ವಿಗಾಗಿ ಎಲ್ಲರೂ ತನು – ಮನದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.