ಕುಕ್ಕೇ ಸುಬ್ರಹ್ಮಣ್ಯ: ಸೋರುತಿಹುದು ಠಾಣಾ ಕಟ್ಟಡದ ಚಾವಣಿ!! ಮಳೆ ನೀರಿನಿಂದ ರಕ್ಷಣೆಗೆ ಟಾರ್ಪಲು ಹೊದಿಕೆ
ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೇ ಸುಬ್ರಹ್ಮಣ್ಯದಲ್ಲಿ ರಕ್ಷಣೆ ನೀಡುವ ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿರುವುದು ಬೆಳಕಿಗೆ ಬಂದಿದೆ.ಕುಕ್ಕೇ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಕಟ್ಟಡದ ಚಾವಣಿ ಸೋರುವ ಕಾರಣದಿಂದ ಮಳೆ ನೀರನ್ನು ತಡೆಯಲು ಈ ಬಾರಿ ಟಾರ್ಪಲಿನ ಹೊದಿಕೆ ಹೊದಿಸಲಾಗಿದೆ.
ಸುಮಾರು 50 ವರ್ಷಗಳ ಹಿಂದಿನ ಠಾಣಾ ಕಟ್ಟಡ ಶಿಥಿಲಗೊಂಡು ನಾಲ್ಕು ವರ್ಷಗಳೇ ಕಳೆದಿದ್ದು, ಈ ನಡುವೆ ಠಾಣಾ ಅಗತ್ಯ ದಾಖಲೆಗಳು ಒದ್ದೆಯಾಗುವ ಭಯ ಕಾಡಿದೆ. ಆರೋಪಿಗಳನ್ನು ಬಂಧಿಸಿಡುವ ಕೊಠಡಿಗಳಲ್ಲಿ ಮಳೆಯ ನೀರು ಸೋರುವ ಕಾರಣ, ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲಿನ ಮೊರೆ ಹೋಗಲಾಗಿದೆ.
ಕಳೆದ ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ,ಠಾಣೆಯನ್ನು ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ಮೀಸಲು ಇರಿಸಿದ್ದಾಗಿ ಹೇಳಿಕೆ ನೀಡಿದ್ದು, ಈ ವರೆಗೆ ಅನುದಾನ ಬಿಡುಗಡೆಗೊಂಡ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
2017ರಲ್ಲೂಮ್ಮೆ ಠಾಣಾ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿಯ ಇಪ್ಪತ್ತಮೂರು ಲಕ್ಷ ಮೊತ್ತ ಕಾದಿರಿಸಲಾಗಿತ್ತಾದರೂ, ಅನುದಾನ ಬಿಡುಗಡೆಗೊಳ್ಳುವಲ್ಲಿ ನಾಲ್ಕು ವರ್ಷಗಳೇ ಕಳೆದಿತ್ತು. ಆದರೆ ಆ ಮೊತ್ತಕ್ಕೆ ಕಟ್ಟಡ ನಿರ್ಮಾಣ ಅಸಾಧ್ಯವಾದ ಕಾರಣ ಇನ್ನಷ್ಟು ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಕೂಡಲೇ ಇತ್ತ ಗಮನಹರಿಸಿ, ಚಾವಣಿ ಮುರಿದು ಬೀಳುವ ಮುನ್ನ ಹೊಸ ಕಟ್ಟಡಕ್ಕೆ ಶೀಲಾನ್ಯಾಸ ನಡೆಯಲಿ ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.