RSS ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಕೆಲವೇ ಗಂಟೆಗಳಲ್ಲಿ ಎಫ್‌ಐಆರ್ ದಾಖಲು!
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಲಕ್ನೋ ಹಾಗೂ ಉನ್ನಾವೋದಲ್ಲಿರುವ ಕಚೇರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಎಚ್ಚೆತ್ತ ಪೊಲೀಸರು ಕೆಲವೇ ಗಂಟೆಗಳ ಬಳಿಕ ಇಂದು ಬೆಳಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಲಕ್ನೋ ಠಾಣಾ ಪೊಲೀಸರು, ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಮಡಿಯಾನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ಸಂದೇಶ ರವಾನಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ, ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಸಂದೇಶಗಳನ್ನು ಸಂಘದ ಸದಸ್ಯ ನೀಲಕಂಠ ತಿವಾರಿಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಳುಹಿಸಲಾಗಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ಮೂರನೇ ವರ್ಷದ ಅಧಿಕಾರಿಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ “ಪ್ರತಿಯೊಬ್ಬರೂ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು. ಹೃದಯದಲ್ಲಿ, ಮಾತಿನಲ್ಲಿ ಅಥವಾ ಕೃತಿಯಲ್ಲಿ ಉಗ್ರವಾದ ಇರಬಾರದು. ಎರಡೂ ಕಡೆಯಿಂದ ಬೆದರಿಕೆಯ ಮಾತುಗಳು ಇರಬಾರದು” ಎಂದು ಹೇಳಿದ್ದರು. ಇವರು ಕೋಮು ಸೌಹಾರ್ದತೆಗಾಗಿ ಕರೆ ನೀಡಿದ ಕೆಲವು ದಿನಗಳ ನಂತರ ಈ ಬೆದರಿಕೆಗಳನ್ನು ಹಾಕಲಾಗಿದೆ.