ಮುಂದಿನ 25 ವರ್ಷಗಳಲ್ಲಿ ರೈತರೇ ಇರುವುದಿಲ್ಲವಂತೆ…!!
ನಮ್ಮ ದೇಶ ಏಳಿಗೆಯತ್ತ ದಾಪು ಕಾಲಿಡುತ್ತಿದ್ದಂತೆ, ಟೆಕ್ನಾಲಜಿಯುತ ಭಾರತವಾಗಿ ರೂಪುಗೊಳ್ಳುತ್ತಿದೆ. ಮಾನವ ತನ್ನ ಕೈ ಗಳನ್ನು ಉಪಯೋಗಿಸಿ ಮಾಡಬೇಕಾದ ಕೆಲಸದಲ್ಲಿಗೆ ಯಂತ್ರಗಳು ಕೈ ಜೋಡಿಸಿದೆ. ವೈವಿಧ್ಯಮಯ ಕೈಗಾರಿಕೆಗಳು ತಲೆ ಎತ್ತುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಆದರೆ ಇದೆಲ್ಲದರ ನಡುವೆ ರೈತ ವೃತ್ತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂದರೂ ತಪ್ಪಾಗಲಾರದು.
ಹೌದು. ಇಂದೆಲ್ಲ ಉದ್ಯೋಗ ಎಂದು ಕಂಪನಿಗಳಿಗೆ ತೆರಳುತ್ತಿದ್ದು, ಕೃಷಿ ಕ್ಷೇತ್ರದ ಒಲವೇ ಇಲ್ಲದ ರೀತಿ ಆಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮದೆ ಆದ ನಿಲುವೊಂದನ್ನು ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸದ್ಗುರು ಅವರು ರೈತರು ಹಾಗೂ ಆ ವೃತ್ತಿ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ರೈತ ವೃತ್ತಿಗೆ ಸಂಬಂಧಿಸಿದಂತೆ ಆಗುವ ಬದಲಾವಣೆಯ ಬಗ್ಗೆ ಒತ್ತಿ ಹೇಳಿದ್ದಾರೆ. ಅವರ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ, ಇಂದಿನ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ 25 ವರ್ಷಗಳಲ್ಲಿ ರೈತರು ಎಂಬುವವರೇ ಯಾರೂ ಇರುವುದಿಲ್ಲ ಎಂಬ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಕೃಷಿಯನ್ನು ಹೆಚ್ಚು ಆಕರ್ಷಣೀಯ ಕಸುಬನ್ನಾಗಿ ರೂಪಿಸುವ ಅವಶ್ಯಕತೆ ಇದೆ. ಇಂದಿನ ಯುವ ಪೀಳಿಗೆ ಈ ವೃತ್ತಿಯನ್ನು ತಮ್ಮ ಕರಿಯರ್ ಅನ್ನಾಗಿ ಆಯ್ದುಕೊಳ್ಳಬೇಕಾದಂತಹ ವಾತಾವರಣ ಸೃಷ್ಟಿಸಬೇಕಾಗಿರುವುದಾಗಿ ಅವರು ಹೇಳುತ್ತಾರೆ.
ರೈತ ವೃತ್ತಿ ಕಣ್ಮರೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಸಂದರ್ಶಕರೊಂದಿಗೆ ಮಾತನಾಡುತ್ತ “ಇನ್ನು 25 ವರ್ಷಗಳಲ್ಲಿ, ಈ ಕಡ್ಡಾಯ ಶಿಕ್ಷಣ ಪ್ರಕ್ರಿಯೆಯು ಮಕ್ಕಳನ್ನು 18 ವರ್ಷದವರೆಗೆ ಶಾಲೆಗೆ ಹೋಗುವಂತೆ ಮಾಡುತ್ತಿದೆ. ಇದರಿಂದಾಗಿ ಅವರು ಎಂದಿಗೂ ಜಮೀನಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಅಲ್ಲದೆ ಕೃಷಿ ಚಟುವಟುಕೆಗಳಲ್ಲಿ ತೊಡಗಿಕೊಳ್ಳದಂತೆ ನಮ್ಮಲ್ಲಿ ಬಾಲಕಾರ್ಮಿಕ ಸಮಸ್ಯೆಗಳೂ ಸಹ ಉಪಸ್ಥಿತವಿದೆ. ಇದರ ಅರ್ಥ ನಾನು ಬಾಲಕಾರ್ಮಿಕರ ಪರ ಅಥವಾ ಕಡ್ಡಾಯ ಶಿಕ್ಷಣ ಪ್ರಕ್ರಿಯೆಯ ವಿರುದ್ಧ ಇದ್ದೇನೆ ಅಂತಲ್ಲ. ಆದರೆ ನಮ್ಮ ರಾಷ್ಟ್ರವು ಎತ್ತ ಸಾಗುತ್ತಿದೆ ನಮ್ಮ ದೇಶದ ಮೂಲಭೂತ ಸ್ವರೂಪ ಹಾಗೂ ಅಂಶಗಳು ಏನು, ಕೃಷಿಯ ಮಹತ್ವ ಎಷ್ಟು ಎಂಬುದನ್ನು ಮಕ್ಕಳಲ್ಲಿ ಅರಿವು ಮೂಡಿಸುವುದರ ಜೊತೆ ಜೊತೆಗೆ ಅವು ನಾಶ ಹೊಂದದ ರೀತಿಯಲ್ಲಿ ನಾವು ನಮ್ಮ ಶಿಕ್ಷಣವನ್ನು ರಚಿಸಬೇಕಾಗಿದೆ.”
“ರೈತರು ಸಹ ಇಂದಿನ ವೈದ್ಯರು, ಇಂಜಿನಿಯರ್ಗಳು, ವಕೀಲರು, ಪತ್ರಕರ್ತರು ಇತ್ಯಾದಿ ಸಂಪಾದಿಸುವಷ್ಟು ಇಲ್ಲವೆ ಅದಕ್ಕಿಂತ ಹೆಚ್ಚು ಆದಾಯವನ್ನು ಗಳಿಸುವಂತಾಗಬೇಕು. ಆಗ ಮಾತ್ರ ಜನರು ಕೃಷಿಯತ್ತ ಆಕರ್ಷಿತಗೊಂಡು ಇದನ್ನು ತಮ್ಮ ವೃತ್ತಿಯನ್ನಾಗಿ ರೂಪಿಸಿಕೊಳ್ಳುವುದರ ಮೂಲಕ ಭೂಮಿಯೊಂದಿಗೆ ಸ್ಪರ್ಶದಲ್ಲಿರುತ್ತಾರೆ. ಇಲ್ಲದಿದ್ದರೆ ಜನರು ನಗರಗಳತ್ತ ವಲಸೆ ಹೋಗುವ ಮೂಲಕ ಜನಸಾಂದ್ರತೆ ಹೆಚ್ಚಾಗಲು ಕಾರಣವಾಗಬಹುದು”ಎನ್ನುತ್ತಾರೆ.
ಒಟ್ಟಿನಲ್ಲಿ ಸದ್ಗುರು ಅವರ ಮಾತು ಎಲ್ಲಾ ಯುವಜನತೆಗೆ ಧ್ಯೆಯವಾಕ್ಯವಾಗಬೇಕು. ನಮ್ಮ ದೇಶದ ಬೆನ್ನೆಲೆಬು ರೈತ ಎಂಬ ಮಾತಿಗೆ ಅನುಗುಣವಾಗಿ ದೇಶ ಬೆಳೆಯಬೇಕಾಗಿದೆ. ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾದರಷ್ಟೇ ನಮ್ಮ ದೇಶ ಮುಂಬರಲು ಸಾಧ್ಯ. ಓದುಗರೇ ಆಲೋಚಿಸಿ.. ಕೃಷಿ ಪ್ರಧಾನ ದೇಶಕ್ಕೆ ಕೈ ಜೋಡಿಸಿ.