ನೂಪುರ್ ಶರ್ಮಾ ಹೇಳಿಕೆ ಅವಾಂತರ : ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಪಕ್ಷದ ನಾಯಕರಿಗೆ ಬಿಜೆಪಿಯಿಂದ ‘ಟಫ್ ರೂಲ್ಸ್’
ನವದೆಹಲಿ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ನೀಡಿರುವ ಹೇಳಿಕೆ ಇದೀಗ ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವೆ ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎನ್ನುವ ಕಿಚ್ಚು ಎಬ್ಬಿಸಿದೆ. ಅಲ್ಲದೆ, ಭಾರತದ ಉತ್ಪನ್ನಗಳಿಗೆ ಅರಬ್ ರಾಷ್ಟ್ರ ನಿರ್ಬಂಧ ಹೇರಿದೆ. ಇದೀಗ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಟಿವಿ ಚರ್ಚೆಯಲ್ಲಿ ಭಾಗವಹಿಸುವ ತನ್ನ ನಾಯಕರಿಗೆ ಹೊಸ ನಿಯಮಗಳನ್ನು ತಂದಿದೆ.
ಹೌದು. ಈ ಚರ್ಚೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ವಕ್ತಾರರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದ್ದು, ಈ ನಿರ್ಧಾರವನ್ನು ಪಕ್ಷದ ಮಾಧ್ಯಮ ವಿಭಾಗ ನಿಯೋಜಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಚರ್ಚೆಯ ಸಂದರ್ಭದಲ್ಲಿ ಯಾವುದೇ ಧರ್ಮ, ವ್ಯಕ್ತಿ ಅಥವಾ ಚಿಹ್ನೆಯನ್ನು ಟೀಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಚರ್ಚೆಯಲ್ಲಿ ಪಾಲ್ಗೊಳ್ಳುವ ವೇಳೆ ವಕ್ತಾರರು ಪಾಲಿಸಬೇಕಾದ ನಿಯಮಗಳನ್ನು ಹೊರಡಿಸಿದ್ದು, ಇಂತಿವೆ.
ಚರ್ಚೆಯಲ್ಲಿ ಮಾತನಾಡುವಾಗ ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು.ಪಕ್ಷದ ಅಜೆಂಡಾ ಮೀರಿ ಮಾತನಾಡಬಾರದು. ಅಲ್ಲದೆ ಸಂಯಮ ಮೀರಬಾರದು ಎಂದು ಹೇಳಲಾಗಿದೆ. ಅಲ್ಲದೆ, ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ತಮ್ಮ ಪಕ್ಷದ ಸಿದ್ಧಾಂತ ಹಾಗೂ ಆದರ್ಶಗಳನ್ನು ಮೀರದಂತೆ ತಿಳಿಸಿದೆ. ಟಿವಿ ಚರ್ಚೆಯಲ್ಲಿ ಭಾಗವಹಿಸುವ ಮೊದಲೇ ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ತಿಳಿದುಕೊಂಡು ಯಾವ ಚಾನಲ್ ಅನ್ನು ಹೋಗಬೇಕು ಎಂದು ತಿಳಿದುಕೊಳ್ಳಲು ಸೂಚನೆ ನೀಡಲಾಗಿದೆ. ಈ ವೇಳೆ ತನ್ನ ಸರ್ಕಾರದ ಸಮಾಜ ಸೇವಾ ಕಾರ್ಯಗಳನ್ನು ಹೆಚ್ಚು ಪ್ರಚುರಪಡಿಸುವಂತೆ ಹೇಳಲಾಗಿದೆ. ಬಿಜೆಪಿ ಪಕ್ಷ ಯಾವುದೇ ಧರ್ಮ, ಪಂಥ ಅಥವಾ ಧರ್ಮವನ್ನು ಅವಮಾನ ಮಾಡುವ ಯಾವುದೇ ಸಿದ್ಧಾಂತದ ವಿರುದ್ಧ ಮಾತನಾಡುವ ಆಲೋಚನೆಯನ್ನು ಸಂಪೂರ್ಣ ಬಿಡಬೇಕು ಎಂದು ಹೇಳಿದೆ.