ಸತತ ಏಳು ವರ್ಷಗಳಿಂದ ಒಂದೇ ಹುಡುಗಿಯನ್ನು ಹಿಂಬಾಲಿಸುತ್ತಿದ್ದ ಯುವಕ ಈಗ ಅರೆಸ್ಟ್ | ಅಷ್ಟಕ್ಕೂ ಆತ ಆಕೆಯನ್ನು ಹಿಂಬಾಲಿಸಲು ಕಾರಣವೇನು ಗೊತ್ತೇ ?
ಕಾಲೇಜಿನಲ್ಲಿ ಹುಡುಗರು ಯುವತಿಯರ ಹಿಂದೆ ಹೋಗಿ, ತಮ್ಮ ಬಣ್ಣಬಣ್ಣದ ಮಾತುಗಳಿಂದ ಪಟಾಯಿಸಿ ಬುಟ್ಟಿಗೆ ಹಾಕಿಕೊಳ್ಳುವುದು ಸಾಮಾನ್ಯ. ಅಷ್ಟಕ್ಕೂ ಒಂದು ಹುಡುಗ ಹುಡುಗಿ ಹಿಂದೆ ಎಷ್ಟು ತಿರುಗಬಹುದು ಹೇಳಿ ? ಆಕೆ ಒಪ್ಕೋಳ್ಳೋವರೆಗೆ. ಆಕೆ ಆತನಿಗೆ ಸೊಪ್ಪು ಹಾಕದಿದ್ದರೆ ಆಕೆಯ ಸುದ್ದಿಗೂ ಹೋಗದೆ, ಬೇರೆ ಯಾರಾದರೂ ಹುಡುಗಿ ಹಿಂದೆ ಸುತ್ತಬಹುದು. ಆದರೆ ಇಲ್ಲೊಬ್ಬ ಯುವಕ ಇದ್ದಾನೆ, ಈತ ಈ ಯುವತಿಯನ್ನು ಏಳು ವರ್ಷಗಳಿಂದಲೂ ನಿರಂತರ ಹಿಂಬಾಲಿಸುತ್ತಿದ್ದಾನಂತೆ.
ಯುವಕ ಹಾಗೂ ಯುವತಿ 2014 ರಲ್ಲಿ ಒಂದೇ ಕಾಲೇಜಿನಲ್ಲಿ ಓದ್ತಾ ಇದ್ದು, ಆಗಿನಿಂದಲೂ ಆತ ಆಕೆಯನ್ನು ಹಿಂಬಾಲಿಸುತ್ತಿದ್ದಾನಂತೆ. ಈ ಬಗ್ಗೆ ಮಹಿಳೆ ಈಗ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು 27 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈ ಘಟನೆ ಪುಣೆಯಲ್ಲಿ ನಡೆದಿದೆ.
ಆರೋಪಿ 2014 ರಲ್ಲಿ ಲೋನಾವಾಲಾದ ಕಾಲೇಜಿನಲ್ಲಿ ತನ್ನೊಂದಿಗೆ ಓದಿದ್ದ, ತನ್ನಂತೆಯೇ ಪದವಿ ಪಡೆದಿದ್ದ ಯುವತಿಯ ಸ್ನೇಹ ಪಡೆಯಲು ಪ್ರಯತ್ನಿಸಿದ್ದ. ಆದರೆ ಈಕೆ ಆತನ ಸ್ನೇಹವನ್ನು ನಿರ್ಲಕ್ಷಿಸಿದ್ದಳು. ಆದರೆ ಕಾಲೇಜಿನ ನಂತರವೂ ಈಕೆಯ ಸಾಮೀಪ್ಯಕ್ಕಾಗಿ ಹಂಬಲಿಸುತ್ತಿದ್ದ ಆತ ಆಕೆಯನ್ನು ನಿರಂತರ ಹಿಂಬಾಲಿಸಲು ಶುರು ಮಾಡಿದ್ದ.
ಕಾಲೇಜಿನಲ್ಲೇ ಯುವತಿಯ ಸ್ನೇಹ ಬಯಸಿದ್ದ ಆತ ಆಕೆ ನಿರ್ಲಕ್ಷಿಸಿದ್ದರೂ ಪದವಿ ಮುಗಿದ ನಂತರ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದ. ಕೇವಲ ಹಿಂಬಾಲಿಸಿದ್ದಲ್ಲದೇ ಎರಡು ಬಾರಿ ಮಹಾರಾಷ್ಟ್ರದ ಇನ್ನೊಂದು ಜಿಲ್ಲೆಯಲ್ಲಿರುವ ಅವಳಿದ್ದ ಬಂಗಲೆಗೆ ಹೋಗಿದ್ದ. ಈ ಬಗ್ಗೆ ಯುವತಿ ಆತನಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ ನಂತರ ಅವನು ಅವಳನ್ನು ಹಿಂಬಾಲಿಸುವುದನ್ನು ನಿಲ್ಲಿಸಿದ್ದ. ನಂತರ ಯುವತಿ ಕೆಲಸದ ದೊರೆತ ನಂತರ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಳು. ಎಲ್ಲವೂ ಮುಗಿಯಿತು ಅಂದುಕೊಳ್ಳುವಾಗಲೇ, ಆರೋಪಿಯು ಆಕೆ ಬಾಡಿಗೆಗಿದ್ದ ಸ್ಥಳ ಮತ್ತು ಕೆಲಸದ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಲ್ಲದೇ ಮತ್ತೆ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದ.
ಮೇ 22 ರಂದು, ಆರೋಪಿ ಮುಂಬೈನ ಖಾರ್‌ನಲ್ಲಿರುವ ಯುವತಿಯ ಕಚೇರಿಗೆ ಹೋಗಿ ಆಕೆಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದ. ಅವಳು ಅವನನ್ನು ಅಲ್ಲಿಂದ ಹೋಗುವಂತೆ ಕೇಳಿಕೊಂಡರೂ, ಅವನು ಸಂಜೆಯವರೆಗೂ ಅಲ್ಲಿಯೇ ಕಾದು ಅವಳು ಮನೆಗೆ ಹಿಂದಿರುಗುತ್ತಿದ್ದಾಗ ಅವಳನ್ನು ಮತ್ತೆ ಭೇಟಿಯಾಗಿದ್ದಾನೆ.
ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಆಟೋರಿಕ್ಷಾ ಹತ್ತಿ ತನ್ನ ಮನೆಗೆ ಹೋಗಿ ಹೇಳಿದ್ದಾಳೆ. ಆದರೆ ಆರೋಪಿ ಮೇ 30 ರಂದು ಮತ್ತೆ ಕಚೇರಿಯಲ್ಲಿ ಅವಳನ್ನು ಭೇಟಿಯಾಗಲು ಪ್ರಯತ್ನಿಸಿದ. ಅಷ್ಟು ಮಾತ್ರವಲ್ಲದೇ ಈ ಸಮಯದಲ್ಲಿ ಆತ ಅವಳ ಕೈ ಹಿಡಿದು ತನ್ನತ್ತ ಎಳೆದು ತಬ್ಬಿಕೊಳ್ಳಲೆತ್ನಿಸಿದ. ಕೂಡಲೇ ಯುವತಿ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು, ಬಳಿಕ ಖಾರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿ ವಿರುದ್ದ ಈಗ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಮಧ್ಯೆ ಆರೋಪಿ ಖಾರ್ ರೈಲು ನಿಲ್ದಾಣದಲ್ಲಿ ಇದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಜೂನ್ 1 ರಂದು ಅವನನ್ನು ಬಂಧಿಸಿದ್ದಾರೆ. ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 2 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.