ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ಇದೆಂತಹಾ ಕ್ರೌರ್ಯ? ಹೆಣ್ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ, ತಾಯಿಗೆ ಎಂಥ ಶಿಕ್ಷೆ?
ಸಮಾಜದಲ್ಲಿ ಗಂಡು ಮಕ್ಕಳಿಗಿರುವಷ್ಟು ಪ್ರಾಶಸ್ತ್ಯ ಬಹುಶಃ ಯಾರಿಗೂ ಇಲ್ಲ ಅನ್ಸುತ್ತೆ. ಸಮಾಜ ಎಷ್ಟೇ ಮುಂದುವರಿದರೂ ಗಂಡು ಹೆಣ್ಣೆಂಬ ಭೇಧ ಮಾತ್ರ ಹೋಗಿಲ್ಲ ಅಂತಾನೇ ಹೇಳಬಹುದು. ಗಂಡು ಮಗುವಿನ ಮೇಲೆ ಜನರ ವ್ಯಾಮೋಹ ತೀವ್ರವಾಗುತ್ತಲೇ ಇದೆ. ಇದರ ಪರಿಣಾಮ ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಗಂಡು ಮಗು ಹೆತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಆಕೆಯ ಕುಟುಂಬಸ್ಥರು ಕಿರುಕುಳ ನೀಡುವುದು ಮನೆಯಿಂದ ಹೊರ ದಬ್ಬುವುದು, ಸತಾಯಿಸುವುದು ಮುಂತಾದ ಘಟನೆಗಳನ್ನು ನಾವು ಕಂಡಿರಬಹುದು ಅಥವಾ ಕೇಳಿರಬಹುದು.
ಈಗ ಉತ್ತರಪ್ರದೇಶದ ಮಹೋಬಾದಲ್ಲಿ ಹೆಣ್ಣು ಮಕ್ಕಳನ್ನೇ ಹೆತ್ತಳು ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಪತಿ ಹಾಗೂ ಆತನ ಮನೆಯವರು ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ. ತನ್ನ ಗಂಡನ ಮನೆಯವರು ಗಂಡು ಮಗುವಿನ ಆಸೆ ಇಟ್ಟಿದ್ದರು, ಆದರೆ ಎರಡೂ ಮಕ್ಕಳು ಹೆಣ್ಣೇ ಆಗಿರುವುದಕ್ಕೆ ಪತಿಯ ಮನೆಯವರು ಆಗಾಗ ಕಿರುಕುಳ ನೀಡುತ್ತಲೇ ಇದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ಮಹಿಳೆಯ ಪತಿ ಮತ್ತು ಅತ್ತೆ ಸೇರಿ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಈ ಘಟನೆಯ ವೀಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಸಂತ್ರಸ್ತ ಮಹಿಳೆಗೆ ಆಕೆಯ ಅತ್ತೆಯ ಮನೆಯ ಇಬ್ಬರು ಹೆಂಗಸರು ಮನೆಯ ಮುಂದೆ ದಾರಿ ಮಧ್ಯೆ ಒದ್ದು ಥಳಿಸಿರುವುದು ಕಾಣುತ್ತಿದೆ. ಅಲ್ಲದೇ ಈ ಇಬ್ಬರು ಮಹಿಳೆಯರು ಆಕೆಯನ್ನು ನಿಂದಿಸುವುದರೊಂದಿಗೆ ಅಳದಂತೆ ಬೆದರಿಕೆ ಕೂಡಾ ಹಾಕಿದ್ದಾರೆ.
ಮಹಿಳೆಯರಿಬ್ಬರೂ ಸೇರಿ ಸಂತ್ರಸ್ತೆಯನ್ನು ಒಮ್ಮೆ ಥಳಿಸಿದರೆ, ಮತ್ತೊಮ್ಮೆ ಒದೆಯುತ್ತಿರುವುದನ್ನು ನೋಡಬಹುದು. ಮರುಕ್ಷಣವೇ ಆಕೆಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೋಬಾ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಮಾತನಾಡಿ, ಸಂತ್ರಸ್ತ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ನಾವು ಎಫ್‌ಐಆರ್ ದಾಖಲಿಸಿದ್ದೇವೆ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.