ಹೋಟೆಲ್ ನಲ್ಲಿ ಚಿಕನ್ ತಂದೂರಿ, ಫ್ರೈಡ್ ರೈಸ್ ತಿಂದು ಸಾವು ಕಂಡ ಪಿಯುಸಿ ವಿದ್ಯಾರ್ಥಿ !!!

ಇತ್ತೀಚೆಗಷ್ಟೇ ಕಾಸರಗೋಡಿನಲ್ಲಿ ಚಿಕನ್ ಶೋರ್ಮ ತಿಂದ 15 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 14 ಮಂದಿ ಅಸ್ವಸ್ಥರಾದ ಘಟನೆ ಕಳೆದ ತಿಂಗಳು ನಡೆದಿತ್ತು. ಈ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿರುವಾಗಲೇ ಇಂತಹದ್ದೇ ಒಂದು ದುರ್ಘಟನೆ ತಮಿಳುನಾಡಿನಲ್ಲಿ ಸಂಭವಿಸಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಈಗ ಸಾವು ಕಂಡಿದ್ದಾನೆ. ತಂದೂರಿ ಚಿಕನ್ ಮತ್ತು ಪ್ರೈಡ್ ರೈಸ್ ತಿಂದ ಬಳಿಕ ಈತನಿಗೆ ವಾಂತಿ-ಭೇದಿ ಕಾಣಿಸಿಕೊಂಡು ಕೊನೆಯುಸಿರೆಳೆದಿದ್ದಾನೆ.

 

ತಿರುಮುರುಗನ್(17) ಎಂಬಾತನೇ ಮೃತ ವಿದ್ಯಾರ್ಥಿ. ಈತ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದ ಆಪಲ್ ಶಾಲೆಯ ಮಾಲೀಕ ಗಣೇಶ್ (ಆಪಲ್ ಗಣೇಶ್) ಅವರ ಪುತ್ರ. ಗಣೇಶ್‌ಗೆ ಇಬ್ಬರು ಪುತ್ರರು. ಈ ಪೈಕಿ ಓರ್ವ ಪುತ್ರನಾದ ತಿರುಮುರುಗನ್ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ. ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಮೇ 24ರಂದು ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೆ ಚಿಕನ್ ತಂದೂರಿ ಮತ್ತು ಪ್ರೈಡ್ ರೈಸ್ ಸೇವಿಸಿದ್ದ. ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್‌ನನ್ನ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ದರಾದರೂ ಪ್ರಯೋಜನವಾಗಲಿಲ್ಲ. ತಿರುಮುರುಗನ್ ಕೊನೆಯುಸಿರೆಳೆದ.

ಇದಕ್ಕೆ ಕಾರಣ ಹೋಟೆಲ್‌ನಲ್ಲಿ ತಿಂದ ತಂದೂರಿ ಚಿಕನ್, ಆಹಾರವು ವಿಷಪೂರಿತ ಆಗಿದ್ದರಿಂದಲೇ ಮಗ ಸತ್ತಿದ್ದಾನೆ ಎಂದು ಮೃತನ ತಂದೆ ಗಣೇಶ್ ಅರಣಿ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

Leave A Reply

Your email address will not be published.