ರಸ್ತೆ ಬದಿ ನಿಂತಿದ್ದ ಯುವತಿಯನ್ನು ಸಾರ್ವಜನಿಕವಾಗಿ ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!
ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣ ಅಂದುಕೊಂಡಿದ್ದ ಪ್ರಕರಣ ತಮಾಷೆಯಾಗಿ ಸುಖಾಂತ್ಯ ಕಂಡಿದೆ.
ಏನಿದು ಪ್ರಕರಣ:
ಮಡಿಕೇರಿ ನಗರದ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ ಯುವತಿ ಅಂಗಡಿ ಮಾಲೀಕನಿಂದ 500ರೂ ಪಡೆದು ಗೂಗಲ್ ಪೇ ಮಾಡಿದ್ದಳು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಇನೋವಾ ಕಾರಿನಲ್ಲಿ ಬಂದು ಅಪಹರಣ ಮಾಡಲಾಗಿದೆ ಎಂದು ಅಂಗಡಿ ಮಾಲೀಕ ರೆಹಮಾನ್ ಪೊಲೀಸರಿಗೆ ದೂರು ನೀಡಿದ್ದರು.
ಅಂಗಡಿ ಮಾಲೀಕ
ಇದರಿಂದಾಗಿ ಮಡಿಕೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು, ಅಲ್ಲದೆ ಈ ಘಟನೆಯಿಂದ ಎಚ್ಚೆತ್ತ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಈ ಪ್ರಕರಣ ತಮಾಷೆಯಾಗಿ ಕಂಡಿದೆ.
ತನಿಖೆಯ ಬಳಿಕ ಹೊರ ಬಿದ್ದ ಸತ್ಯಾಂಶ:
‘ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ ಯುವತಿಯು ತನ್ನ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಸ್ನೇಹಿತರೊಂದಿಗೆ ತಾನು ಹಣ ಇಲ್ಲದಿದ್ದರೂ ಊರು ತಲುಪುತ್ತೇನೆ ಎಂದು ಮೋಜಿಗಾಗಿ ಬೆಟ್ಟಿಂಗ್ ಕಟ್ಟಿ, ಕಾರಿನಿಂದಿಳಿದು ಹೊರಟರು. ಸಂಪಿಗೆಕಟ್ಟೆ ಸಮೀಪ ಗೂಗಲ್ ಪೇ ಮಾಡಿ ಅಂಗಡಿಯೊಂದರ ಮಾಲೀಕರಿಂದ 500 ರೂ ನಗದು ಪಡೆದು, ಬಸ್‌ನಲ್ಲಿ ಹೊರಡಲು ಸಿದ್ಧವಾಗಿದ್ದರು.
ಈ ವೇಳೆ ಯುವತಿಯನ್ನು ಹುಡುಕುತ್ತ ಬಂದ ಸ್ನೇಹಿತರು ಆಕೆಯನ್ನು ಎಳೆದೊಯ್ದರು. ಇದು ಸಾರ್ವಜನಿಕರಿಗೆ ಅಪಹರಣದಂತೆ ಕಂಡಿತು’ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಯುವತಿಯನ್ನು ಬಲವಂತವಾಗಿ ಎಳೆದೊಯ್ದ
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಹೇಳಿಕೆ ಪಡೆಯಲಾಗಿದೆ. ಅಪಹರಣ ಪ್ರಕರಣ ಇದಾಗದೇ ಇರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.