ಹೆಲ್ತ್ ಟಿಪ್ಸ್ : ಈ ಎರಡು ಬಗೆಯ ಎಲೆಗಳನ್ನು ಸೇವಿಸಿ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸಿ !!
ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಕೆಲವು ಕಾಯಿಲೆಗಳಿಗೆ ಸಾಕಷ್ಟು ಜನರು ಗಿಡ ಮೂಲಿಕೆಗಳ ಮೊರೆ ಹೋಗುತ್ತಾರೆ. ಔಷಧೀಯ ಗುಣವಿರುವ ಗಿಡಮೂಲಿಕೆಗಳು ಅದೆಷ್ಟು ರೋಗವಾಸಿ ಮಾಡುವಲ್ಲಿ ಸಫಲವಾಗಿವೆ. ಇತ್ತೀಚಿನ ಜನರಲ್ಲಿ ಕಂಡುಬರುವ ರೋಗವೆಂದರೆ ಅದು ಮಧುಮೇಹ.
ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ಮಧುಮೇಹದ ಸಂಕೇತವಾಗಿರುತ್ತದೆ. ಈ ಸ್ಥಿತಿಯು ನಿಮ್ಮ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಮುಂದೆ ಇದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕುರುಡುತನ, ಹೃದಯಾಘಾತ ಮುಂತಾದ ಗಂಭೀರ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಮಧುಮೇಹ ರೋಗಿಗಳಿಗೆ ಯಾವಾಗಲೂ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ.
ಹಾಗಿದ್ದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ಏನು ಮಾಡಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಮನಸ್ಸಿನಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿ ಅಧಿಕ ಮತ್ತು ಕಡಿಮೆ ಸಕ್ಕರೆ ಪ್ರಮಾಣ ಎರಡನ್ನೂ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವ ವಸ್ತುಗಳನ್ನು ಸೇವಿಸಬೇಕು. ಈ ಎರಡು ರೀತಿಯ ಎಲೆಗಳನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಸಾಧ್ಯವಾಗುತ್ತದೆ.
ಈ ಎಲೆಗಳು ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ನಿಮ್ಮ ರಕ್ತದೊತ್ತಡವನ್ನು ಕೂಡಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳೆಂದರೆ 1-ಬೇವಿನ ಎಲೆಗಳು 2- ಕರಿಬೇವಿನ ಎಲೆಗಳು.
ಮಧುಮೇಹದಲ್ಲಿ ಕರಿಬೇವಿನ ಪ್ರಯೋಜನಗಳು :
ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ಖಾದ್ಯಗಳಲ್ಲಿ ಕರಿಬೇವು ಸಿಗುತ್ತದೆ. ಯಾಕೆಂದರೆ ಪಲ್ಯ, ಸಾಂಬಾರ್, ರಸಂ, ಚಿತ್ರಾನ್ನ, ಮೊಸರನ್ನ , ಪುಳಿಯೊಗರೇ ಹೀಗೆ ಏನೇ ಅಡುಗೆ ಮಾಡಿದರೂ ಅದರ ಒಗ್ಗರಣೆಗೆ ಕರಿಬೇವು ಬಳಸಿಯೇ ಬಳಸುತ್ತೇವೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಅನೇಕ ಅದ್ಭುತ ಔಷಧೀಯ ಗುಣಗಳನ್ನು ಕೂಡಾ ಹೊಂದಿದೆ. ಕರಿಬೇವಿನ ಎಲೆಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಜಗಿಯುವುದರಿಂದ ಇನ್ಸುಲಿನ್ ಕೂಡ ಹೆಚ್ಚಾಗುತ್ತದೆ. ದಿನಕ್ಕೆ 10 ಎಲೆಗಳನ್ನು ಅಗಿಯಬಹುದು ಅಥವಾ ಅದರ ರಸವನ್ನು ತೆಗೆದು ಕುಡಿಯಬಹುದು.
ಮಧುಮೇಹದಲ್ಲಿ ಬೇವಿನ ಎಲೆಗಳ ಪ್ರಯೋಜನಗಳು :
ಬೇವಿನ ಎಲೆಗಳನ್ನು ಜಗಿಯುವ ಮೂಲಕ ದೇಹಕ್ಕೆ ಅನೇಕ ಔಷಧೀಯ ಪ್ರಯೋಜನಗಳನ್ನು ಪಡೆಯಬಹುದು. ಬೇವಿನ ಕಾಂಡ, ಹಣ್ಣುಗಳೆಲ್ಲವೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಚರ್ಮ ರೋಗಗಳಿಂದ ಹಿಡಿದು ಜ್ವರ, ಹಲ್ಲುನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.