ಉಡುಪಿ : ಪಡುಬಿದ್ರೆಯ ಯುಪಿಸಿಎಲ್ ಪವರ್ ಪ್ಲಾಂಟ್ ಗೆ ಬರೋಬ್ಬರಿ 52 ಕೋಟಿ ದಂಡ ವಿಧಿಸಿದ ರಾಷ್ಟ್ರೀಯ ಹಸಿರು ಪೀಠ!!!

ಉಡುಪಿ : ಪಡುಬಿದ್ರೆಯ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ಪೀಠ ಆಘಾತ ನೀಡಿದೆ. ಬರೋಬ್ಬರಿ 52 ಕೋಟಿ ರೂಪಾಯಿ ದಂಡ ವಿಧಿಸಿ ಎಚ್ಚರಿಸಿದೆ. ಮೊದಲಿನಿಂದಲೂ ಪರಿಸರ ವಿರೋಧಿ ಎಂಬ ಹಣೆಪಟ್ಟಿಯನ್ನು ಹೊತ್ತಿಕೊಂಡಿರುವ ಸಂಸ್ಥೆ ಇದಾಗಿದೆ.

ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಈ ಕುರಿತು ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ವಿಶೇಷ ತಂಡಗಳ ಮೂಲಕ ಅಧ್ಯಯನ ನಡೆಸಿದ ಪೀಠ, ಮೇ 31ರಂದು ಯುಪಿಸಿಎಲ್‌ಗೆ ಬರೋಬ್ಬರಿ 52 ಕೋಟಿ ರೂ. ದಂಡ ವಿಧಿಸಿದೆ.

ಎಲ್ಲೂರು ಗ್ರಾಮದಲ್ಲಿ ಕಳೆದ ಒಂದೂವರೆ ದಶಕದಿಂದ ಸಕ್ರಿಯವಾಗಿರುವ, ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವಾಗಿದೆ. ಪರಿಸರದ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ಪರಿಗಣಿಸಿ ಬೃಹತ್ ಮೊತ್ತದ ದಂಡ ನೀಡಿದೆ.

ಯುಪಿಸಿಯಲ್ ಸ್ಥಾವರವು ಈ ಮೊದಲೇ ಐದು ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇರಿಸಿದೆ. ಈ ಮೊತ್ತವನ್ನು ದಂಡದ ಸ್ವರೂಪದಲ್ಲಿ ವಿನಿಯೋಗ ಮಾಡಿಕೊಳ್ಳಲು ಹಸಿರು ಪೀಠ ಸೂಚಿಸಿದೆ. ಅಷ್ಟು ಮಾತ್ರವಲ್ಲದೇ ದಂಡದ ಮೊತ್ತವನ್ನು ಬರುವ ಮೂರು ತಿಂಗಳ ಒಳಗಾಗಿ ಯುಪಿಸಿಎಲ್ ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಪಾವತಿಸಬೇಕೆಂದು ಹೇಳಿದೆ. ಈ ಹಣವನ್ನು ಪರಿಸರದ ಸುರಕ್ಷತೆಯ ದೃಷ್ಟಿಯಿಂದ ಬಳಸಿಕೊಳ್ಳುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಹಸಿರುಪೇಟೆ ನಿರ್ದೇಶನ ನೀಡಿದೆ.

ಯುಪಿಸಿಎಲ್ ಪರಿಸರದ 10 ಕಿ.ಮೀ. ಪ್ರದೇಶದಲ್ಲಿ ಪರಿಸರ, ಬೆಳೆ ಹಾನಿ, ಮಣ್ಣಿನ ಫಲವತ್ತತೆಯ ಪರೀಕ್ಷೆ ಮಾಡಬೇಕು. ಕುಡಿಯುವ ನೀರು ಕಪ್ಪು ವರ್ಣಕ್ಕೆ ತಿರುಗಿರುವುದು, ಗಾಳಿಯ ಗುಣಮಟ್ಟ ಪರಿಶೀಲನೆ, ಗ್ರಾಮದ ರೈತ ಹಾಗೂ ಪರಿಸರದ ಮನೆಮಂದಿಯನ್ನೂ ಎಲ್ಲರನ್ನೂ ಭೇಟಿ ಮಾಡಿ ಯುಪಿಸಿಎಲ್ ನಿಂದಾಗಿರುವ ನಷ್ಟವನ್ನು ಅಂದಾಜಿಸಲು ಸಮಿತಿಯೊಂದನ್ನು ರಚಿಸಲು ಸೂಚಿಸಿದೆ.

ಉಡುಪಿ ಜಿಲ್ಲಾಧಿಕಾರಿ ಅಥವಾ ಸಹಾಯಕ ಕಮಿಷನರ್ ಅಥವಾ ತಾಲೂಕು ದಂಡಾಧಿಕಾರಿಗಳ ಸಹಿತ ಯುಪಿಸಿಎಲ್‌ನ ಓರ್ವ ಪ್ರತಿನಿಧಿ, ಉಳಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಈ ವಿಶೇಷ ಸಮಿತಿಯಲ್ಲಿರುತ್ತಾರೆ. ಸಮಿತಿಯು ಅಂದಾಜಿಸುವ ಮೊತ್ತವನ್ನು ಯುಪಿಸಿಎಲ್ ಮೂಲಕ ಆಯಾಯ ರೈತರಿಗೆ, ಸಂತ್ರಸ್ತರಿಗೆ ತಲಪುವಂತೆಯೂ ನೋಡಿ ಕೊಳ್ಳಬೇಕೆಂದು ಪೀಠವು ಆದೇಶಿಸಿದೆ.

Leave A Reply

Your email address will not be published.