ಪರಸ್ಪರ ರಾಜಿ ಮೂಲಕ ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸ ಬಹುದು-ಹೈಕೋರ್ಟ್

ಬೆಂಗಳೂರು: ಮಹಿಳೆಯೊಬ್ಬರು ತಮ್ಮ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್‌, ದೂರುದಾರರು ಮತ್ತು ಆರೋಪಿಗಳು ಪರಸ್ಪರ ರಾಜಿ ಮೂಲಕ ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

 

ಆರೋಪಿಗಳಾಗಿದ್ದ ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಗಳಾದ ಕೆ.ಸತೀಶ್‌, ಶ್ರೀನಿವಾಸ್‌, ಕೋಕಿಲಾ ಮತ್ತು ಮಮತಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಮಹಿಳೆಯೊಬ್ಬರು 2022ರ ಫೆ.16ರಂದು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಿ, ಸತೀಶ್‌ ವಿರುದ್ಧ ಅತ್ಯಾಚಾರ ಹಾಗೂ ಉಳಿದ ಮೂವರ ವಿರುದ್ಧ ಜೀವ ಬೆದರಿಕೆ, ಅಪಮಾನ ಮತ್ತು ವಸೂಲಿ ಆರೋಪ ಮಾಡಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಎಲ್ಲ ಆರೋಪಿಗಳು ಮತ್ತು ದೂರುದಾರ ಮಹಿಳೆಯು ಹೈಕೋರ್ಟ್‌ಗೆ ಹಾಜರಾಗಿ, ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ನಿರ್ಧರಿಸಿದ್ದೇವೆ. ದೂರನ್ನು ಹಿಂಪಡೆಯಲು ದೂರುದಾರರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿ ಜಂಟಿ ಮೊಮೊ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರಿ ವಕೀಲರು, ಆರೋಪಿಗಳ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪವಿರುವ ಕಾರಣ ರಾಜಿ ಸಂಧಾನಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ, ರಾಜಿ ಸಂಧಾನದ ಮೂಲಕ ಅತ್ಯಾಚಾರ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು ಎಂಬುದಾಗಿ ಸ್ಪಷ್ಟಪಡಿಸಿ ಸುಪ್ರೀಂ ಕೋರ್ಟ್‌ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳ ಪ್ರತಿಯನ್ನು ಅರ್ಜಿದಾರರ ಪರ ವಕೀಲರು ಸಲ್ಲಿಸಿದ್ದು, ಇದನ್ನು ನ್ಯಾಯಪೀಠ ಒಪ್ಪಿಕೊಂಡಿತು.

Leave A Reply

Your email address will not be published.