ಕುವೆಂಪು ಬಗ್ಗೆ ಅಪಾರ ಗೌರವವಿದೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದೇನು ?
ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಾಹಿತಿಗಳ ವಿರುದ್ಧ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಕುವೆಂಪು ಅವರ ಪಠ್ಯ ಹಾಗೂ ನಾಡಗೀತೆ ವಿಚಾರವಾಗಿ ತಮ್ಮ ವಿರುದ್ಧದ ಆರೋಪ, ವಿವಾದಗಳಿಗೆ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೋಹಿತ್ ಚಕ್ರತೀರ್ಥ 2017ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಅರೇಬಿಕ್ ಭಾಷೆ ಕಲಿಸುತ್ತೇವೆ’ ಎಂದು ನೀಡಿದ ಹೇಳಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶದ ಒಂದು ಭಾಗವಾಗಿ ಯಾರೋ ಒಬ್ಬರು ನಾಡಗೀತೆಯ ದಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದರು. ವಾಟ್ಸ್‌ಅಪ್ ಮೂಲಕ ಬಂದಿದ್ದ ಯಾರೋ ಬರೆದಿದ್ದ ಆ ಸಾಲುಗಳನ್ನು ನಾನು ನನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೆ. ಇದು ವಾಟ್ಸ್‌ಅಪ್‌ನಲ್ಲಿ ಬಂದಿದ್ದು ಎಂದೂ ನಾನು ಉಲ್ಲೇಖಿಸಿದ್ದೆ.
ನನ್ನ ವಿರುದ್ಧ ಹಿಂದೆಯೇ ದೂರು ನೀಡಿ ತನಿಖೆಯೂ ಆಗಿ ವಸ್ತುಸ್ಥಿತಿ ವಿವರಿಸಿದಾಗ ಪೊಲೀಸರು ನನ್ನದೇನೂ ತಪ್ಪಿಲ್ಲ ಎಂದು ಕಳುಹಿಸಿದ್ದರು. ಆದರೆ, ಕೆಲವರು ಈಗ ರಾಜಕೀಯಕ್ಕಾಗಿ, ಸ್ವಹಿತಾಸಕ್ತಿಗಾಗಿ ಹಳೆಯ ವಿಚಾರವನ್ನು ತೆಗೆದುಕೊಂಡು ನಾನೇ ಆ ಸಾಲುಗಳನ್ನು ಬರೆದಿದ್ದೇನೆಂದು ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ.
ನಾನು ಕುವೆಂಪು ಅವರ ವ್ಯಕ್ತಿತ್ವಕ್ಕಾಗಲಿ, ಬರಹಕ್ಕಾಗಲಿ ಯಾವುದೇ ಅವಮಾನ ಮಾಡಿಲ್ಲ. ಮಾಡುವ ಉದ್ದೇಶವೂ ನನಗಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ಹೀಗೆ ಒಬ್ಬ ಕನ್ನಡಿಗನನ್ನು ತೇಜೋವಧೆ ಮಾಡಿ ಹಣಿಯವ ಕೆಲಸವನ್ನು ಮಾಡಬೇಡಿ ಎಂದು ವಿವಾದಿತ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮನವಿ ಮಾಡಿದ್ದಾರೆ.
ಕುವೆಂಪು ಅವರ ವ್ಯಕ್ತಿತ್ವಕ್ಕಾಗಲೀ, ಬರಹಕ್ಕಾಗಲೀ ಅವಮಾನ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಕುವೆಂಪು ಬರಹಗಳನ್ನು ಶಾಲಾ ದಿನಗಳಿಂದಲೂ ಓದಿಕೊಂಡು ಬಂದಿದ್ದೇನೆ. ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಕೆಲವು ವಿಶಿಷ್ಟ ಪಾತ್ರಗಳ ಬಗ್ಗೆ ಉಪನ್ಯಾಸ ಮಾಡಿದ್ದೇನೆ ಮತ್ತು ಬರೆದಿದ್ದೇನೆ’ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಬೇಂದ್ರೆ ಮತ್ತು ಕುವೆಂಪು ಕನ್ನಡದ ಗಂಗೆ- ಕಾವೇರಿಯರು ಎಂಬ ಶೀರ್ಷಿಕೆ ಕೊಟ್ಟು ಬರೆದವನು ನಾನು. ಕುವೆಂಪು ಮೇಲೆ ಗೌರವ ಇದ್ದ ಕಾರಣಕ್ಕಾಗಿ ನಮ್ಮ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅವರ ಅತ್ಯುತ್ತಮ ಶಿಶು ಸಾಹಿತ್ಯವಾದ ಬೊಮ್ಮನಹಳ್ಳಿ ಕಿಂದರಿ ಜೋಗಿಯನ್ನು ಪಾಠವಾಗಿ ಅಳವಡಿಸಿದ್ದೆವು’ ಎಂದಿದ್ದಾರೆ.
ಕುವೆಂಪು ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಗಾಸಿ ಉಂಟು ಮಾಡಿದೆ. ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿ, ತೇಜೋವಧೆ ಮಾಡುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ. ಸಾಮಾಜಿಕ ಜಾಣತಾಣದಲ್ಲಿ ನಾಡಗೀತೆಗೆ ಅವಮಾನ ಮಾಡಿ ಬರೆದ ವ್ಯಕ್ತಿಗೆ ಶಿಕ್ಷೆಯಾಗಲಿ’ ಎಂದು ಹೇಳಿದ್ದಾರೆ.