ಮಂಗಳೂರು : ವಿಚಾರವಾದಿ ನರೇಂದ್ರ ನಾಯಕ್ ಸವಾಲು ಸ್ವೀಕರಿಸಿದ ನಾಲ್ವರು ಜ್ಯೋತಿಷಿಗಳು | ಯಾರಿಗೆಲ್ಲ ದೊರೆಯಿತು 1 ಲಕ್ಷ ರೂಪಾಯಿ ಬಂಪರ್ ಬಹುಮಾನ?
ಮಂಗಳೂರು : ಮಳಲಿ ಮಂದಿರ ವರ್ಸಸ್ ಮಸೀದಿ ವಿವಾದ ಸಾಮಾಜಿಕ ಜಾಲತಾಣ ಸೇರಿದಂತೆ ಹಲವಾರು ಕಡೆ ಭಾರೀ ವಿವಾದ ಸೃಷ್ಟಿ ಮಾಡಿತ್ತು. ಇದೀಗ ಈ ವಿಷಯ ಕೋರ್ಟ್ ಅಂಗಳದಲ್ಲಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಇತ್ತೀಚೆಗೆ ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ಒಂದು ಸವಾಲು ಹಾಕಿದ್ದರು.
ಸೀಲ್ ಮಾಡಿದ ಲಕೋಟೆಯಲ್ಲಿರುವುದನ್ನು ನಿಖರವಾಗಿ ಹೇಳಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದ್ದರು. ಮೊದಲೇ ತಿಳಿಸಿದಂತೆ ಲಕೋಟೆಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ತೆರೆಯಲಾಗಿದೆ. ನರೇಂದ್ರ ನಾಯಕ್ ಅವರು ನೀಡಿದ ಲಕೋಟೆಯೊಳಗಿನ ಸವಾಲಿಗೆ ನಾಲ್ಕು ಮಂದಿ ಜ್ಯೋತಿಷಿಗಳು ಉತ್ತರಿಸಿದ್ದಾರೆ. ಹಾಗಾದರೆ ಅವರು ನೀಡಿದ ಉತ್ತರ ಸರಿಯೋ? ತಪ್ಪೋ ? ಈ ಸವಾಲನ್ನು ಯಾರು ಗೆದ್ದರು? ಬನ್ನಿ ಎಲ್ಲಾ ತಿಳಿಯೋಣ.
ಲಕೋಟೆಯೊಳಗೇನಿತ್ತು ? ಮೇ. 26ರ ಬೆಳಗ್ಗೆ 11.30ಕ್ಕೆ ನರೇಂದ್ರ ನಾಯಕ್ ಅವರು ಏಳು ಲಕೋಟೆಗಳನ್ನು ಸೀಲ್ ಮಾಡಿದ್ದರು. ಮೊದಲ ಲಕೋಟೆಯಲ್ಲಿ ಏನನ್ನೂ ಹಾಕಿರಲಿಲ್ಲ. ಎರಡನೇ ಲಕೋಟೆಯಲ್ಲಿ ಪೇಪರ್ನೊಳಗೆ ಒಂದು ಡಾಲರ್ ಇರಿಸಲಾಗಿತ್ತು. ಮೂರನೇ ಲಕೋಟೆಯಲ್ಲಿ ಅರಬ್ ದೇಶದ 10 ದಿರಾಮ್, ನಾಲ್ಕನೇ ಲಕೋಟೆಯಲ್ಲಿ ನೇಪಾಲದ 20 ರೂ., 5ನೇ ಲಕೋಟೆಯಲ್ಲಿ ಸಿಂಗಾಪುರದ 10 ಡಾಲರ್ ಬಿಲ್, 6ನೇ ಕವರ್ನಲ್ಲಿ ” ASTROLOGY HAS FLOPPED MISERABLY ONCE AGAIN” ಎಂದು ಬರೆದ ಪತ್ರ, 7ನೇ ಲಕೋಟೆಯಲ್ಲಿ ಭಾರತದ 10 ರೂ. ಕರೆನ್ಸಿ ಇರಿಸಲಾಗಿತ್ತು. 7 ಲಕೋಟೆಗಳಲ್ಲಿ 6ನ್ನು ಉತ್ತರಿಸಿ, ಅದರಲ್ಲಿ 5 ಸರಿ ಉತ್ತರ ನೀಡುವ 50 ಮಂದಿಗೆ ಒಂದು ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಸವಾಲೊಡ್ಡಿದ್ದರು. ಇದಕ್ಕೆ ಸರಿಯುತ್ತರವನ್ನು ಮೇ. 31ರ ರಾತ್ರಿ 12 ಗಂಟೆಯವರೆಗೆ ಕಳುಹಿಸಲು ಅವಕಾಶವಿತ್ತು.
ಮೊದಲೇ ತಿಳಿಸಿದಂತೆ ಲಕೋಟೆಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ತೆರೆಯಲಾಗಿದೆ. ಸವಾಲಿಗೆ ನಾಲ್ಕು ಮಂದಿ ಜ್ಯೋತಿಷಿಗಳು ಉತ್ತರಿಸಿದ್ದಾರೆ. ಒಬ್ಬರು ಒಂದು ಲಕೋಟೆ ಖಾಲಿ, ಮತ್ತೊಬ್ಬರು ಆರು ಲಕೋಟೆ ಖಾಲಿ, ಮತ್ತೊಂದರಲ್ಲಿ ಕರೆನ್ಸಿ, ಭಸ್ಮ ಹೂ, ದೈವದೇವರ ಫೋಟೋ ಇದೆ ಎಂದು ಉತ್ತರಿಸಿದ್ದರು. ಇನ್ನೊಂದು ಉತ್ತರದಲ್ಲಿ ಮಳಲಿ ಮಸೀದಿ ಅಡಿ ದೇವಸ್ಥಾನ ಇದೆ ಎಂದು ಬರೆಯಲಾಗಿದ್ದು, ಇದು ಸವಾಲಿನ ಪ್ರಶ್ನೆಯಾಗಿದ್ದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ವಿಚಾರವಾದಿ ನರೇಂದ್ರ ನಾಯಕ್ ತಿಳಿಸಿದ್ದಾರೆ.
ವಿಚಾರವಾದಿ ನರೇಂದ್ರ ನಾಯಕ್ ಅವರ ಸವಾಲಿಗೆ ನಾಲ್ವರು ಜ್ಯೋತಿಷಿಗಳು ಉತ್ತರಿಸಿದ್ದು, ಅವರ ಉತ್ತರಗಳು ತಪ್ಪಾಗಿವೆ ಎಂದು ತಿಳಿದು ಬಂದಿದೆ.