400 ಕೋಟಿ ವೆಚ್ಚದ ಸುವರ್ಣ ವಿಧಾನಸೌಧದ ಮೆಟ್ಟಿಲಲ್ಲಿ ಬಿಸಿಲಿಗೆ ಒಣಹಾಕಿದ “ಸಂಡಿಗೆ ಶಾವಿಗೆ” !!!

0 12

ಶಾವಿಗೆ ಹಾಗೂ ಸಂಡಿಗೆ, ಹಪ್ಪಳವನ್ನು ಸುವರ್ಣ ವಿಧಾನ ಸೌಧದ ಆವರಣದ ಪ್ರವೇಶದ್ವಾರದ ಮೆಟ್ಟಿಲಿನ ಮೇಲೆ ಒಣಗಲು ಹಾಕಿರುವ ಘಟನೆಯೊಂದು ನಡೆದಿದೆ. ಇವುಗಳ ಫೋಟೋಗಳು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದು ನಿಜಕ್ಕೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಎಂದೇ ಹೇಳಬಹುದು. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧದಲ್ಲಿ ಈ ರೀತಿಯ ಘಟನೆ ನಡೆದಿರುವುದು ಖೇದಕರ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಜನರಿಂದ ಟೀಕೆ ಟಿಪ್ಪಣಿ ಬರಲು ಶುರುವಾಗಿದೆ.

ಸೌಧದ ಪ್ರವೇಶ ದ್ವಾರದ ಮೆಟ್ಟಿಲುಗಳ ಬಳಿಯೇ ಈ ಸಂಡಿಗೆ, ಹಪ್ಪಳವನ್ನು ಒಂದು ಬಟ್ಟೆಯ ಮೇಲೆ ಬಿಸಿಲಿನಲ್ಲಿ ಒಣಗಲು ಹಾಕಿದ್ದು, ಭದ್ರತೆ ಭೇದಿಸಿ ಇದನ್ನು ಹಾಕಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಅನೇಕರು ಇದಕ್ಕೆ ಟೀಕೆ ಟಿಪ್ಪಣಿ ಮಾಡಿದ್ದಾರೆ. ಕೆಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸಂಡಿಗೆ, ಹಪ್ಪಳವನ್ನು ಚಳಿಗಾಲ ಅಧಿವೇಶನಕ್ಕಾಗಿ ತಯಾರಿ ಮಾಡಲು ಮುಂಚಿತವಾಗಿಯೇ ಒಣಗಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಸರ್ಕಾರ ಇಲ್ಲಿ ಸಂಡಿಗೆ ಮೇಳ ಹಮ್ಮಿಕೊಳ್ಳಲಿದೆ ಇನ್ನೂ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ನಡೆದ ಘಟನೆ ಏನು? ಸುವರ್ಣ ವಿಧಾನಸೌಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತಾದರೂ ಸುವರ್ಣ ವಿಧಾನಸೌಧದ ಭದ್ರತಾ EKSISF ಗೆ ವಹಿಸಲಾಗಿದೆ.

ಅಲ್ಲದೇ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾ ಮಟ್ಟದ ಕೆಲ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸ್ವಚ್ಛತಾ ಕೆಲಸಕ್ಕೆಂದು ಅಕ್ಕಪಕ್ಕದ ಗ್ರಾಮಗಳ ಕಾರ್ಮಿಕರು ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ವಿಶೇಷವಾಗಿ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿ ಶಾವಿಗೆ ಹೊಸೆದು ಮಾರಾಟ ಮಾಡಲಾಗುತ್ತದೆ.

ಸಾಂಬ್ರಾ ಶಾವಿಗೆ ಉತ್ತರ ಕರ್ನಾಟಕದಲ್ಲಿಯೇ ಫುಲ್ ಫೇಮಸ್. ಉತ್ತರ ಕರ್ನಾಟಕ ಸೇರಿ ನೆರೆಯ ಮಹಾರಾಷ್ಟ್ರ, ಗೋವಾಗೂ ಸಾಂಬ್ರಾ ಗ್ರಾಮದಲ್ಲಿ ತಯಾರಿಸಿದ ಶಾವಿಗೆ ರವಾನೆ ಆಗುತ್ತೆ. ಹೀಗಿರುವಾಗ ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುವ ಸಾಂಬ್ರಾ ಗ್ರಾಮದ ಓರ್ವ ಕಾರ್ಮಿಕ ಮಹಿಳೆ ಮತ್ತೋರ್ವ ಕಾರ್ಮಿಕ ಮಹಿಳೆಗೆ ಶಾವಿಗೆ ತಂದು ಕೊಟ್ಟಿದ್ದಾರೆ.

ಈ ವೇಳೆ ಶಾವಿಗೆ ಹಸಿ ಇದೆ ಎಂಬ ಕಾರಣಕ್ಕೆ ಸುವರ್ಣಸೌಧದ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಸೀರೆ ಹಾಯಿಸಿ ಅದರ ಮೇಲೆ ಶಾವಿಗೆ ಒಣಹಾಕಿದ್ದಾಳೆ. ಮಧ್ಯಾಹ್ನ ವೇಳೆ ಪೆಟ್ರೋಲಿಂಗ್ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಶಾವಿಗೆ ಒಣಹಾಕಿದ್ದನ್ನು ಕಂಡು ತಕ್ಷಣ ತೆರವು ಮಾಡಿಸಿದ್ದಾರೆ. ಕಾರ್ಮಿಕ ಮಹಿಳೆಯರಿಗೂ ತರಾಟೆಗೆ ತಗೆದುಕೊಂಡಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಯಾರೋ ಅಪರಿಚಿತರು ಈ ಫೋಟೋ ತಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Leave A Reply