KPSC ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮಕ್ಕೆ ತಿದ್ದುಪಡಿ
ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರದ ವಿವಿಧ ಇಲಾಖೆಗಳಿಗೆ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳನ್ನು ನೇಮಕ ಮಾಡುತ್ತಿದೆ. ಇದೀಗ ಈ ಸದರಿ ಹುದ್ದೆಗಳ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಶ್ರೇಣಿ ಮತ್ತು ಗ್ರೂಪ್ ಬಿ ಶ್ರೇಣಿ ಹುದ್ದೆಗಳಿಗೆ ನೇಮಕಗೊಂಡು ನೇಮಕಾತಿ ಆದೇಶ ಪತ್ರ ಪಡೆಯದೇ ಬಾಕಿ ಉಳಿಯುವ ಹುದ್ದೆಗಳನ್ನು ತರುವಾಯದ ನೇಮಕ ಸದರ್ಭದಲ್ಲಿ ಸೇರ್ಪಡೆ ಮಾಡಿಕೊಳ್ಳುವ ತಿದ್ದುಪಡಿಗೆ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯ ಗೆಜೆಟೆಡ್ ಪ್ರೊಬೇಷನರುಗಳ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಾತಿ ಆದೇ ಪಡೆದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೆ ಹುದ್ದೆಗಳು ಖಾಲಿ ಉಳಿದರೆ ಅವುಗಳನ್ನು ಹೊಸದಾಗಿ
ಖಾಲಿ ಉಳಿದವು ಎಂದು ಪರಿಗಣಿಸುವ ನಿಯಮಕ್ಕೆ ತಿದ್ದುಪಡಿ ತರಲು ಕಡತ ಸಚಿವ ಸಂಪುಟದ ಮುಂದೆ ಮಂಡನೆ ಆಗಿತ್ತು. ಈ ತಿದ್ದುಪಡಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಗಳ ನೇಮಕಾತಿ ನಿಯಮಗಳು, 1997 ರ ನಿಯಮಕ್ಕೆ 11ಕ್ಕೆ ಸರ್ಜರಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಪ್ರಕ್ರಿಯೆ ಮುಗಿದ ನಂತರ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕಾರಣಾಂತರಗಳಿಂದ ತಾವು ಆಯ್ಕೆಯಾದ ಹುದ್ದೆಗೆ ಆದೇಶ ಸ್ವೀಕರಿಸಿ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ, ಅದೇ ನೇಮಕಾತಿಯಲ್ಲೂ ಬೇರೆ ಹುದ್ದೆಗೆ ಆಯ್ಕೆಯಾದ ಅಥವಾ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವ ಇತರೆ ಅಭ್ಯರ್ಥಿಗಳು ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೊಗುತ್ತಿದ್ದರು. ವರದಿ ಮಾಡಿಕೊಂಡಿರದೇ ಇರುವ ರಿಕ್ತ ಸ್ಥಾನಗಳಿಗೆ ಅಂತಹವರನ್ನು ಪರಿಗಣಿಸಿದರೆ, ಇಡೀ ಆಯ್ಕೆ ಪಟ್ಟಿಯೇ ಬದಲಾಗುವ ಸಾಧ್ಯತೆ ಇತ್ತು. ಇದರಿಂದ ನೇಮಕದಲ್ಲಿ ಗೊಂದಲ ಉಂಟಾಗುತ್ತಿತ್ತು. ಜತೆಗೆ ನ್ಯಾಯಾಲಯದ ಮೆಟ್ಟಿಲು ಕೂಡ ಏರಿ ಸಮಸ್ಯೆ ಸೃಷ್ಟಿಯಾಗಿತ್ತು. ಆದ್ದರಿಂದ ಇಂತಹ ಖಾಲಿ ಉಳಿಯ ಹುದ್ದೆಗಳನ್ನು ತರುವಾಯದ ನೇಮಕದಲ್ಲಿ ಸೇರ್ಪಡೆಗೊಳಿಸಲು ಕರ್ನಾಟಕ ಗೆಜೆಟೆಡ್
ಪ್ರೊಬೇಷನರ್ಗಳ ನೇಮಕಾತಿ ನಿಯಮ ತಿದ್ದುಪಡಿಗೆ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಮೇಲೆ ತಿಳಿಸಿದಂತೆ ಸದರಿ ಹುದ್ದೆಗಳ ನೇಮಕಾತಿ ನಿಯಮ ತಿದ್ದುಪಡಿಗೆ 15 ದಿನಗಳ ಒಳಗಾಗಿ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಷ್ಟರೊಳಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಸ್ವೀಕೃತವಾಗದೇ ಇದ್ದರೆ, ಪುನಃ ಸಂಪುಟದ ಅನುಮೋದನೆಗೆ ಮಂಡಿಸದೇ ಅಂತಿಮವಾಗಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.