ಕನ್ಯಾದಾನ ಯೋಜನೆಯ ಲಾಭ ಪಡೆಯಲು ಸಾಮೂಹಿಕ ವಿವಾಹದಲ್ಲಿ ಮತ್ತೊಮ್ಮೆ ವಿವಾಹವಾಗಲು ಸಿದ್ದನಾದ ಕಾಂಗ್ರೆಸ್ ಮುಖಂಡ ಪೊಲೀಸ್ ವಶಕ್ಕೆ
ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನ 2ನೇ ಬಾರಿ ಪಡೆಯುವ ನಿಟ್ಟಿನಲ್ಲಿ 15 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಕಾಂಗ್ರೆಸ್ ನ ಎನ್ ಎಸ್ ಯುಐ ಘಟಕದ ಸಂಚಾಲಕ ನೈತಿಕ್ ಚೌಧರಿ ಸಾಮೂಹಿಕ ವಿವಾಹದಲ್ಲಿ ಮತ್ತೊಮ್ಮೆ ವಿವಾಹವಾಗಲು ಯತ್ನಿಸಿದ್ದ ವೇಳೆ ಸಿಕ್ಕಿ ಬಿದ್ದು ಮಧ್ಯಪ್ರದೇಶದ ಪೊಲೀಸರಿಂದ ಬಂಧಿತನಾದ ಘಟನೆ ವರದಿಯಾಗಿದೆ.
ಎನ್ ಎಸ್ ಯುಐನ ಸಂಚಾಲಕ ನೈತಿಕ್ ಚೌಧರಿ ಹದಿನೈದು ದಿನಗಳ ಹಿಂದೆ ಹಸೆಮಣೆ ಏರಿದ್ದ. ಆದರೆ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ವಿವಾಹವಾಗಲು ಸಿದ್ಧನಾಗಿ ಕುಳಿತಿದ್ದ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಈತನ ಗುರುತನ್ನು ಪತ್ತೆ ಹಚ್ಚಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ನೈತಿಕ್‌ನನ್ನು ಬಂಧಿಸಿದ್ದು, ನಂತರ ಬಿಡುಗಡೆಗೊಳಿಸಲಾಯಿತು ಎಂದು ವರದಿ ತಿಳಿಸಿದೆ.
ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತ್ತು. ಮಧ್ಯಪ್ರದೇಶದ ಬಿಜೆಪಿ ಮಾಧ್ಯಮ ವಕ್ತಾರ ಲೋಕೇಂದ್ರ ಪರಾಶರ್ ಟ್ವೀಟ್ ನಲ್ಲಿ, ಎನ್ ಎಸ್ ಯುಐನ ಸಂಚಾಲಕ ಮುಖ್ಯಮಂತ್ರಿ ಕನ್ಯಾದಾನ ಯೋಜನೆ ಪಡೆಯಲು ಎರಡನೇ ಬಾರಿ ಮದುವೆಯಾಗಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆಯಾಗಿದೆ. ಈತನನ್ನು ಪೊಲೀಸರು ಬಂಧಿಸಿದ್ದು, ಈಗ ಏನು ಹೇಳುತ್ತೀರಿ ಕಮಲನಾಥಜೀ ಎಂದು ಪ್ರಶ್ನಿಸಿದ್ದರು.
ಎಬಿಪಿ ನ್ಯೂಸ್ ವರದಿ ಪ್ರಕಾರ, ಭಾರತೀಯ ಜನತಾ ಪಕ್ಷದ ಶಾಸಕ ಶೈಲೇಂದ್ರ ಜೈನ್ ಅವರು ಸಾಗರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಿದ್ದರು ಎಂದು ತಿಳಿಸಿದೆ.