ಮಂಗಳೂರು : ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅವಕಾಶವಿಲ್ಲ | ಹಿಜಾಬ್ ಬೇಕು ಎನ್ನುವವರಿಗೆ ಬೇರೆ ಕಾಲೇಜಿನಲ್ಲಿ ವ್ಯವಸ್ಥೆ !

Share the Article

ಮಂಗಳೂರು: ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಶುರುವಾಗಿದೆ. ಈಗ ಮತ್ತೆ ಶಾಲಾರಂಭವಾಗಿದ್ದು, ಮತ್ತೆ ಹಿಜಾಬ್ ವಿವಾದ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು ಕೆಲವೊಂದು ಮಹತ್ವದ ನಿರ್ಧಾರ ಮಾಡಲಾಗಿದೆ.

ತರಗತಿಯಲ್ಲಿ ಹಿಜಾಬ್ ಧರಿಸುವುದಾಗಿ ಹೇಳುವ ವಿದ್ಯಾರ್ಥಿನಿಯರಿಗೆ ಬೇರೆ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಹೇಳಿದರು.

ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಶುಕ್ರವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಈ ವಿದ್ಯಾರ್ಥಿನಿಯರಿಗೆ ಆಪ್ತ ಸಮಾಲೋಚನೆ ಏರ್ಡಿಡಿಸುವ ಮೂಲಕ ಅವರ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸಲಾಗುವುದು’ ಎಂದರು.

ತರಗತಿಯ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿರುವ ಉಪನ್ಯಾಸಕರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

ಹೈಕೋರ್ಟ್‌ ಹಾಗೂ ಸರ್ಕಾರದ ಆದೇಶದ ಪ್ರಕಾರ, ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಲಾಗಿದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿಗೆ ವಿನಾಯಿತಿ ನೀಡಿಲ್ಲ. ಉಪನ್ಯಾಸಕರು, ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದ್ದು, ಪ್ರಾಂಶುಪಾಲರು ಹಿಜಾಬ್ ನಿರ್ಬಂಧಿಸುವ ವಿಷಯದಲ್ಲಿ ವಿಳಂಬ ತೋರಿದ್ದಾರೆ ಎಂದರು.

ಕಾಲೇಜು ಅಭಿವೃದ್ಧಿ ಮಂಡಳಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.