ಪದೇ ಪದೇ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ | ಇಲ್ಲವಾದಲ್ಲಿ ನಿಮಗಿದೆ ಅಪಾಯ!
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ಇರುತ್ತದೆ. ಆದರೆ ಕೆಲವೊಂದು ಜನಕ್ಕೆ ಅಭ್ಯಾಸ ಅನ್ನುವುದಕ್ಕಿಂತಲೂ ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಬೋರ್ ಆದಾಗ, ಇನ್ನೊಬ್ಬರ ಜೊತೆ ಮಾತನಾಡುವಾಗಲೂ ಈ ಕಡೆಯಿಂದ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸ ನಿಮ್ಮನ್ನು ಅನಾರೋಗ್ಯಕ್ಕೆ ದೂಡುವುದರಲ್ಲಿ ಡೌಟ್ ಇಲ್ಲ.
ಹೌದು. ತಜ್ಞರು ಈ ಕುರಿತಾದ ಮಾಹಿತಿ ಬಿಚ್ಚಿಟ್ಟಿದ್ದು, ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ನೆಟ್ಟಿಗೆ ತೆಗೆಯುವುದು ಅಭ್ಯಾಸವಾಗಿಬಿಟ್ಟರೆ, ಪದೇ ಪದೇ ನೆಟ್ಟಿಗೆ ತೆಗೆಯುತ್ತಲೇ ಇರುತ್ತೇವೆ. ತಜ್ಞರು ಹೇಳುವಂತೆ, ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್ ಸಮಸ್ಯೆಗಳು ಹೆಚ್ಚಾಗುತ್ತಂತೆ.
ದೇಹದ ಕೀಲುಗಳಲ್ಲಿ ಒಂದು ದ್ರವವಿರುತ್ತದೆ. ನಾವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವಾಗ ಈ ದ್ರವವು ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದರೊಳಗೆ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತದೆ. ಈ ಗುಳ್ಳೆಗಳು ಸಿಡಿದಾಗ ನಮಗೆ ಶಬ್ಧ ಕೇಳಿಸುತ್ತದೆ ಎನ್ನುತ್ತಾರೆ. ನಮ್ಮ ಸಂಧಿಗಳು ಅನೇಕ ಬಾರಿ ಶಬ್ಧ ಮಾಡುತ್ತಿರುತ್ತದೆ. ಕೆಲವೊಮ್ಮೆ ನಾವು ವೇಗವಾಗಿ ನಡೆಯುವಾಗ, ಓಡುವಾಗ, ಆಟವಾಡುವಾಗಲೂ ಈ ರೀತಿಯ ಶಬ್ದಗಳು ಬರಬಹುದು.
ದೀರ್ಘ ಕಾಲದವರೆಗೆ ಈ ರೀತಿಯಾಗಿ ನೆಟ್ಟಿಗೆ ತೆಗೆಯುವ ಅಭ್ಯಾಸ ಇದ್ದರೆ, ನಮ್ಮ ಕೈಗಳ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಯಲ್ಲಿ ಊತ ಉಂಟಾಗುವುದು ಮತ್ತು ಬೆರಳುಗಳು ಸೆಟೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಬೆರಳುಗಳ ನೆಟ್ಟಿಗೆ ತೆಗೆಯುವಾಗ ಹೆಚ್ಚು ನೋವು ಕಾಣಿಸಿಕೊಳ್ಳದಿದ್ದರೆ, ಹೆಚ್ಚು ಸಮಸ್ಯೆಗಳೇನು ಇಲ್ಲ. ಆದರೆ, ಬೆರಳಲ್ಲಿ ನೋವು ಕಾಣಿಸಿಕೊಂಡರೆ, ತಕ್ಷಣವೇ ಈ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಬಿಟ್ಟು ಬಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ.