ಚರಂಡಿಗೆ ಬಿದ್ದ ತನ್ನ ಕರುಳ ಬಳ್ಳಿಯನ್ನು ರಕ್ಷಿಸಲು ಜೀವದ ಹಂಗು ತೊರೆದು 20 ಅಡಿ ಆಳಕ್ಕೆ ಹಾರಿದ ಮಹಿಳೆ | ಮಗುವನ್ನು ರಕ್ಷಿಸುವ ಹೆತ್ತಬ್ಬೆಯ ಮಾತೃ ವಾತ್ಸಲ್ಯದ ವೀಡಿಯೋ ವೈರಲ್
ತನ್ನ ಕರುಳಬಳ್ಳಿಗಾಗಿ ತಾಯಿ ಏನು ಮಾಡಲೂ ಕೂಡ ಸಿದ್ಧಳಿರುತ್ತಾಳೆ. ಅದರಲ್ಲೂ ತನ್ನ ಮಗುವಿಗೆ ಏನಾದರೂ ಅಪಾಯ ಎದುರಾದರೆ ಹೇಗಾದರೂ ಮಾಡಿ ತನ್ನ ಕೂಸನ್ನು ಬಚಾವ್ ಮಾಡುತ್ತಾಳೆ ಆಕೆ. ಇದಕ್ಕೆ ನೈಜ ಉದಾಹರಣೆ ಈ ಘಟನೆ. ತನ್ನ ಮಗುವನ್ನು ರಕ್ಷಿಸಲು ಮಹಿಳೆಯೊಬ್ಬರು 20 ಅಡಿ ಚರಂಡಿಗೆ ಹಾರಿರುವ ಭಯಾನಕ ಕ್ಷಣವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂಗ್ಲೆಂಡ್‍ನ ಕೆಂಟ್‍ನಲ್ಲಿ 23ರ ಹರೆಯದ ಆಮಿ ಬ್ಲೈತ್ ತನ್ನ 18 ತಿಂಗಳ ಮಗ ಥಿಯೋ ಪ್ರಿಯರ್ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಪಕ್ಕದ ಮನೆಯ ಸಿಸಿಟಿವಿಯಲ್ಲಿ ಈ ಘಟನೆಯ ದೃಶ್ಯಾವಳಿ ಸೆರೆಯಾಗಿದೆ. ವೈರಲ್ ಆಗಿರುವ ಈ ವೀಡಿಯೋದಲ್ಲಿ ಆಮಿ ಥಿಯೋನ ಕೈ ಹಿಡಿದು ಮುಚ್ಚಿದ ಚರಂಡಿಯ ಮೇಲೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಚರಂಡಿ ಮೇಲೆ ನಡೆದು ಮುಂದೆ ಹೋದಾಗ ಮಗುವಿಗೆ ಏನೋ ಕುತೂಹಲವುಂಟಾಗಿದೆ. ಕೊಳಚೆ ನೀರು ಹರಿಯುವ ಸದ್ದು ನೋಡಿ ಅದನ್ನು ಪರೀಕ್ಷಿಸಲು ಆ ಮಗು ಮತ್ತೆ ಚರಂಡಿಯತ್ತ ಹಿಂತಿರುಗಿ ಬಂದಿದೆ. ಚರಂಡಿ ಮೇಲಿನ ಸ್ಲ್ಯಾಬ್ ಮೇಲೆ ಕಾಲಿಟ್ಟ ತಕ್ಷಣವೇ ಮಗು ಏಕಾಏಕಿ ಆಳವಾದ ಗುಂಡಿಗೆ ಬಿದ್ದಿದೆ. ತಕ್ಷಣವೇ ಮಹಿಳೆ ಕಬ್ಬಿಣದ ಹೊದಿಕೆಯನ್ನು ತೆಗೆದು 20 ಅಡಿ ಆಳದ ಚರಂಡಿಗೆ ಹಾರಿ ಮಗುವಿನ ಪ್ರಾಣ ಉಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಚರಂಡಿಗೆ ಹಾರಿ ಮಹಿಳೆ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ ಮಗು ಹರಿಯುತ್ತಿದ್ದ ಕೊಳಚೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿತ್ತು. ಘಟನೆಯಲ್ಲಿ ಮಗು ಮತ್ತು ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಆದರೆ, ಈ ಘಟನೆಯಿಂದ ಮಗುವಿನ ತಾಯಿಗೆ ಆಘಾತವಾಗಿದೆ.
ಘಟನೆ ಬಳಿಕ ತನ್ನ ಮಗುವನ್ನು ರಕ್ಷಿಸಿರುವ ಬಗ್ಗೆ ವೀಡಿಯೋ ಸಮೇತ ಮಹಿಳೆ ಫೇಸ್‍ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮಹಿಳೆಯ ಸಮಯಪ್ರಜ್ಞೆ ಪುಟ್ಟ ಮಗುವಿನ ಪ್ರಾಣ ಉಳಿಯಿತು, ತನ್ನ ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ ಅನ್ನೋದಕ್ಕೆ ಇದೇ ಸೂಕ್ತ ನಿದರ್ಶನ ಎಂದೆಲ್ಲಾ ನೆಟಿಜನ್‍ಗಳು ಕಾಮೆಂಟ್ ಮಾಡಿದ್ದಾರೆ.