ಮತ್ತೆ ಗಡಿಭಾಗದಲ್ಲಿ ಕನ್ನಡಕ್ಕೆ ಅವಮಾನ | ಮದುವೆ ಸಮಾರಂಭವೊಂದರಲ್ಲಿ ಕನ್ನಡ ಹಾಡು ಹಾಕಿ ಕುಣಿದ ಕನ್ನಡಿಗರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ

ಬೆಳಗಾವಿ: ಮದುವೆ ಸಮಾರಂಭವೊಂದರಲ್ಲಿ ಕನ್ನಡ ಹಾಡು ಹಾಕಿ ಕುಣಿದ ಕಾರಣಕ್ಕೆ ವಧು-ವರ ಸೇರಿ ಐವರು ಕನ್ನಡಿಗರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ನಡೆದಿದೆ.

 

ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರನ ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆ ಮಾಡಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಆತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಧಾಮಣೆ ಗ್ರಾಮದಲ್ಲಿ ಸೈಬಣ್ಣವರ ಕುಟುಂಬದ ಮದುವೆ ಸಮಾರಂಭವಿತ್ತು. ಹೀಗಾಗಿ ಕುಟುಂಬಸ್ಥರು ರಾತ್ರಿ ಬ್ಯಾಂಡ್ ನೊಂದಿಗೆ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವಕರು ಕನ್ನಡ ಧ್ವಜ ಹಿಡಿದು ‘ಕರುನಾಡೇ ಕೈ ಚಾಚಿದೆ ನೋಡೆ…’ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದರು.

ಈ ವೇಳೆ ಸ್ಥಳಕ್ಕಾಗಮಿಸಿದ ಎಂಇಎಸ್ ನ ಕೆಲವು ಯುವಕರು ಕನ್ನಡ ಧ್ಚಜ ಹಿಡಿದು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಜಯ ಯಳ್ಳೂರಕರ, ಆಕಾಶ ಸೇರಿ ಹಲವು ಯುವಕರು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಗಡಿಭಾಗ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ತೋರಿದ್ದು, ಬೆಳಗಾವಿ ಅಧಿವೇಶನದ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಕಿರಿಕ್ ಮಾಡಿದ್ದವರು ಮತ್ತೆ ಇದೀಗ ಬಾಲ ಬಿಚ್ಚಿದೆ. ಇವರ ವಿರುದ್ದ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.