ಜಿಲ್ಲಾಡಳಿತದ ವೈಫಲ್ಯವೇ ಮಳಲಿ ವಿವಾದಕ್ಕೆ ಕಾರಣ: ಎಸ್‌ಡಿಪಿಐ ಆರೋಪ

ಪದೇ ಪದೇ ಮುಸ್ಲಿಂ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸದಿರಿ:-ಅಬೂಬಕ್ಕರ್ ಕುಳಾಯಿ

ಮಂಗಳೂರು,ಮೇ 25 : ಮಳಲಿಪೇಟೆಯಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಆರಾಧನೆ ಮಾಡುತ್ತಿದ್ದ ಮಸೀದಿಯನ್ನು ನವೀಕರಣ ಕಾರ್ಯಕ್ಕಾಗಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ, ಆ ಮಸೀದಿಯ ರಚನೆ ಮಂದಿರಕ್ಕೆ ಹೋಲಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಕೊಂಡು ಬಜರಂಗದಳದ ಗೂಂಡಾ ನಾಯಕ ಶರಣ್ ಪಂಪ್ವೆಲ್ ಎಂಬವನ ನೇತೃತ್ವದಲ್ಲಿ ಸಂಘಪರಿವಾರ ಮಸೀದಿಯೊಳಗೆ ಹೋಗಿ ರಾದ್ದಾಂತವನ್ನು ಉಂಟು ಮಾಡಿ ಈ ವಿವಾದ ಸೃಷ್ಟಿಸಿದ್ದು ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಎಸ್‌ಡಿಪಿಐ ಆರೋಪಿಸಿದೆ.

ಮಳಲಿಪೇಟೆಯ ಪುರಾತನ ಮಸೀದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದ್ದರೂ ಅವೆಲ್ಲವನ್ನೂ ಗಾಳಿಗೆ ತೂರಿ ತಾಂಬೂಲ ಎಂಬ ನಾಟಕೀಯ ವಿಧ್ಯಮಾನವನ್ನು ಸೃಷ್ಟಿಸಿ ಜನರೆಡೆಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬುವ ಮೂಲಕ ಸಮಾಜದಲ್ಲಿ ಕೋಮುಗಳ ಮಧ್ಯೆ ಬಿರುಕು ಹುಟ್ಟಿಸಿ ದ್ವೇಷ ಹರಡಿಸಲು ನಡೆಸಿದ ಸಂಚಾಗಿದೆ. ಸಂಘಪರಿವಾರಕ್ಕೆ ತಾಂಬೂಲ ಮಾಡಲು ಅವಕಾಶ ನೀಡಿರುವುದು ಜಿಲ್ಲಾಡಳಿತದ ಮತ್ತೊಂದು ವೈಫಲ್ಯವಾಗಿದೆ.

ವಿವಾದ ನಡೆದ ತಕ್ಷಣ ಅದರ ದಾಖಲೆ ಪರಿಶೀಲಿಸಿ ವಿವಾದವನ್ನು ತಕ್ಷಣ ಪರಿಹರಿಸಿಕೊಡಬೇಕಾಗಿದ್ದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ನಿಷ್ಕ್ರಿಯವಾಗಲು ಕಾರಣವೇನು? ಮಸೀದಿ ನವೀಕರಣಕ್ಕೆ ತಡೆಯೊಡ್ಡಿದ ಜಿಲ್ಲಾಡಳಿತಕ್ಕೆ ಮಂದಿರದ ಬಗ್ಗೆ ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ತಡೆ ನೀಡಲು ಯಾಕೆ ಸಾಧ್ಯವಾಗಿಲ್ಲ?

ತಾಂಬೂಲ, ಜ್ಯೋತಿಷ್ಯ ಇತ್ಯಾದಿಗಳ ಹಿಂದೆ ಹೋಗಿ ಜನರನ್ನು ಮರಳು ಮಾಡುವುದಾದರೆ ಇಲ್ಲಿ ಕಾನೂನು, ಕೋರ್ಟ್, ಕಚೇರಿ, ಪೋಲಿಸ್ ಇಲಾಖೆ, ಜಿಲ್ಲಾಧಿಕಾರಿ ಇತ್ಯಾದಿ ಯಾಕಿದೆ? ಸದಾ ದ್ವೇಷವನ್ನು ಬಿತ್ತುವುದರಲ್ಲೇ ಕಳೆಯುವ ಗೂಂಡಾ ಶರಣ್ ಪಂಪ್ವೆಲ್‌ನ ವಿರುದ್ಧ ಜಿಲ್ಲಾಡಳಿತ ಯಾಕೆ ಮೌನವಾಗಿದೆ?

ಸಂಘಪರಿವಾರ ಈ ವಿಚಾರದಲ್ಲಿ ಇನ್ನು ಮುಂದೆ ವಿವಾದ ಎಬ್ಬಿಸಿದರೆ ಜಿಲ್ಲೆಯ ಮುಸ್ಲಿಮರು ಮೌನವಾಗಿರಲು ಸಾಧ್ಯ ವಿಲ್ಲ. ಇಲ್ಲಿನ ಯಾವುದೇ ಮಂದಿರವಾಗಲಿ, ಮಸೀದಿಯಾಗಲಿ, ಚರ್ಚ್ ಅಥವಾ ಇನ್ನಿತರ ಆರಾಧನಾಲಯಗಳ ವಿರುದ್ದ ಷಡ್ಯಂತ್ರ ರೂಪಿಸಿದರೆ ಅವೆಲ್ಲದರ ವಿರುದ್ಧ ಎಸ್‌ಡಿಪಿಐ ಹೋರಾಟ ನಡೆಸಲಿದೆ. ಹಾಗಾಗಿ ಈ ವಿವಾದವನ್ನು ತಕ್ಷಣ ಜಿಲ್ಲಾಡಳಿತ ಮೌನ ಮುರಿದು ಇತ್ಯರ್ಥಗೊಳಿಸಬೇಕು. ಇಂತಹ ಷಡ್ಯಂತ್ರಗಳ ಮೂಲಕ ಸಮಾಜದ ತಾಳ್ಮೆಯನ್ನು ಪರೀಕ್ಷೆಸುವ ಕೆಲಸಕ್ಕೆ ಕೈ ಹಾಕದಿರಿ. ಇದರಿಂದ ಜಿಲ್ಲೆಯ ಶಾಂತಿ ಕದಡಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.