ಪ್ರತಿದಿನವೂ ಮಗನ ಕ್ರಿಕೆಟ್ ಬ್ಯಾಟ್ ನಲ್ಲಿ ಗಂಡನೇ ಬಾಲ್ ಎಂಬಂತೆ ಹಿಗ್ಗಾಮುಗ್ಗಾ ಬಾರಿಸುವ ಪತ್ನಿ !! | ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋದ ಹೆಡ್ ಮಾಸ್ಟರ್
ಸಂಸಾರದಲ್ಲಿ ಸಣ್ಣಪುಟ್ಟ ಜಗಳ ಮಾಮೂಲಿ. ಆದರೆ ಇಲ್ಲಿ ಮಹಿಳೆಯೊಬ್ಬಳು ಮಗನ ಮುಂದೆಯೇ ಕ್ರಿಕೆಟ್ ಬ್ಯಾಟ್ನಿಂದ ಪತಿಯನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದು, ಈ ಹಿನ್ನೆಲೆ ಪತಿಯೂ ತನ್ನ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತೊಂದರೆಗೀಡಾದ ಪತಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಇವರು ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನನ್ನ ಪತ್ನಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಈ ಹಿನ್ನೆಲೆ ನನಗೆ ರಕ್ಷಣೆ ಕೊಡಿ ಎಂದು ಪ್ರಾಂಶುಪಾಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪತಿಯು ದೂರಿನಲ್ಲಿ, ಪತ್ನಿ ನನ್ನ ಮೇಲೆ ಪ್ಯಾನ್, ಸ್ಟಿಕ್ ಮತ್ತು ಕ್ರಿಕೆಟ್ ಬ್ಯಾಟ್ನಿಂದ ಪ್ರತಿದಿನ ಹಲ್ಲೆ ನಡೆಸುತ್ತಿದ್ದಾಳೆ. ಇದರಿಂದ ಗಾಬರಿಗೊಂಡ ನಾನು ಸಾಕ್ಷ್ಯ ಸಂಗ್ರಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ ಎಂದು ತಿಳಿಸಿದ್ದಾರೆ. ಪತ್ನಿ ಹಲ್ಲೆ ಮಾಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿದೆ.
ವೀಡಿಯೋದಲ್ಲಿ ಪತ್ನಿ ತಮ್ಮ ಮಗನ ಮುಂದೆಯೇ ಆತನ ಕ್ರಿಕೆಟ್ ಬ್ಯಾಟ್ ಹಿಡಿದು ಪತಿಗೆ ಕ್ರಿಕೆಟ್ ಬ್ಯಾಟ್ನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಈ ಹಿನ್ನೆಲೆ ಪತಿಯೂ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಘಟನೆಯ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ. ಅವರಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಾಂಶುಪಾಲರಾದ ಅಜಿತ್ ಸಿಂಗ್ ಯಾದವ್ ಅವರು ಏಳು ವರ್ಷಗಳ ಹಿಂದೆ ಹರಿಯಾಣದ ಸೋನಿಪತ್ ನಿವಾಸಿ ಸುಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ, ಅವರ ಜೀವನವು ಚೆನ್ನಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಸುಮನ್ ಅವರು ಅಜಿತ್ ಅವರಿಗೆ ಹೊಡೆಯುವುದನ್ನು ಪ್ರಾರಂಭಿಸಿದರು. ಆಗಾಗ್ಗೆ ಪತ್ನಿ ನೀಡುತ್ತಿದ್ದ ಹಿಂಸೆಯಿಂದ ಅಜಿತ್ಗೆ ಹಲವು ಗಾಯವಾಗಿದೆ. ಅವುಗಳನ್ನು ಗುಣಪಡಿಸಲು ಅವರು ವೈದ್ಯಕೀಯ ಸಹಾಯವನ್ನು ಪಡೆಯುತ್ತಿದ್ದರು ಎಂದು ಅವರೇ ತಿಳಿಸಿದ್ದಾರೆ.
ಆದರೆ ಇದನ್ನು ಸಾಬೀತು ಮಾಡಲು ಯಾವುದೇ ರೀತಿಯ ಸಾಕ್ಷ್ಯಿಗಳು ಇಲ್ಲದ ಹಿನ್ನೆಲೆ ಅಜಿತ್ ಮನೆಯಲ್ಲಿ ಯಾರಿಗೂ ತಿಳಿಯದಂತೆ ಕ್ಯಾಮೆರಾ ಇಟ್ಟಿದ್ದಾರೆ. ನಂತರ ಸುಮನ್ ಬ್ಯಾಟ್ನಲ್ಲಿ ಹೊಡೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿ ಮಿತಿಗಳನ್ನು ಮೀರಿದ್ದರಿಂದ ನಾನು ನ್ಯಾಯಾಲಯದ ಆಶ್ರಯ ಪಡೆದಿದ್ದೇನೆ. ಸೋದರ ಮಾವ ಸಹ ನನ್ನ ಪತ್ನಿಯನ್ನು ಹಿಂಸೆಗೆ ಪ್ರೇರೇಪಿಸುತ್ತಾನೆ ಎಂದು ಆರೋಪಿಸಿದ್ದಾರೆ.