ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ
ಧಾರವಾಡ: ಶಿಕ್ಷಕರ ಮನೆಬಾಗಿಲಿಗೆ ತೆರಳಿ ಇಂದಿನ ನೈಜ ಪರಿಸ್ಥಿತಿಯನ್ನು ವಿವರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಆಮೂಲಕ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ನಗರದ ನೌಕರರ ಭವನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 40 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ನಡೆಸುತ್ತಿರುವ ಬಸವರಾಜ ಗುರಿಕಾರ ಅವರು ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಗಳು ಶಿಕ್ಷಕರಿಗೆ ನೀಡಿರುವ ಕೆಲ ಸೌಲಭ್ಯಗಳಲ್ಲಿ ಗುರಿಕಾರ ಅವರು ನಡೆಸಿದ ಹೋರಾಟದ ಪಾತ್ರ ಬಹುಮುಖ್ಯವಾದದ್ದು. ಅದಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಶಿಕ್ಷಕರು ಬದಲಾವಣೆ ಬಯಸಿದ್ದು, ಗುರಿಕಾರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ತಿಮ್ಮಯ್ಯ ಪುರ್ಲೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಕರು ಮತ್ತು ಸರ್ಕಾರಿ ನೌಕರರಿಗೆ ಎರಡಕ್ಕಿಂತ ಹೆಚ್ಚು ಬಾರಿ ವೇತನ ಹೆಚ್ಚಳ ಮಾಡಲಾಯಿತು. ಅದಕ್ಕೆ ಪ್ರಮುಖ ರೂವಾರಿ ಬಸವರಾಜ ಗುರಿಕಾರ. ನಿರಂತರ ಹೋರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯ ಹೆಚ್ಚಳ ಮಾಡುವಂತೆ ಮಾಡಿದರು ಎಂದರು.
ಪಕ್ಷದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಗುರಿಕಾರ ಅವರು ಅಧಿಕಾರ ಇಲ್ಲದ ಸಂದರ್ಭದಲ್ಲೇ ಶಿಕ್ಷಕರ ಸಂಘಟನೆ ಮೂಲಕ ಸಾಕಷ್ಟು ಶ್ರಮವಹಿಸಿ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದರೆ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ನಾಲ್ಕು ದಶಕಗಳ ಸುದೀರ್ಘ ಹೋರಾಟದಲ್ಲಿ ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ. ಶಿಕ್ಷಕರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದು, ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿದರು. ಪ್ರೊ. ಐ.ಜಿ.ಸನದಿ, ವೀರಣ್ಣ ಮತ್ತಿಕಟ್ಟಿ, ಕಸುಮಾವತಿ ಶಿವಳ್ಳಿ, ಶಾಕೀರ ಸನದಿ, ಡಾ. ಎಂ.ಕುಬೇರಪ್ಪ, ರಾಮಕೃಷ್ಣ ದೊಡ್ಡಮನಿ, ಎನ್.ಎಚ್.ಕೋನರಡ್ಡಿ, ಸದಾನಂದ ಡಂಗನವರ, ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ನೀಲಕಂಠ ಅಸೂಟಿ, ವಿನೋದ ಅಸೂಟಿ, ಪ್ರಕಾಶ ಹಳಿಯಾಳ, ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮಠ, ಟಿ.ಆರ್.ಶಿರೋ, ಎಸ್.ಕೆ.ರಾಮದುರ್ಗ ಇದ್ದರು.