” ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ” – ಇ.ಡಿ ಗೆ ಸಾಕ್ಷಿದಾರ ಅಲಿಶಾ ಪರ್ಕರ್ ಹೇಳಿಕೆ
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದೆ. ಅದನ್ನು ಆಧರಿಸಿ ಇ.ಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿದಾರರೊಬ್ಬರು ಭೂಗತ ಪಾತಕಿ ದಾವುದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ ಎಂಬುದಾಗಿ ಸಾಕ್ಷಿ ನುಡಿದಿದ್ದಾರೆ. ದಾವೂದ್ ತನ್ನ ಒಡಹುಟ್ಟಿದವರಿಗೆ ಪ್ರತಿ ತಿಂಗಳು 10 ಲಕ್ಷ ಕಳುಹಿಸುತ್ತಾನೆ ಎಂಬುದಾಗಿ ಮತ್ತೊಬ್ಬ ಸಾಕ್ಷಿದಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹೇಳಿಕೆ ನೀಡಿದ್ದಾರೆ.
‘1986ರ ಬಳಿಕ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದಾಗಿ ವಿವಿಧ ಮೂಲಗಳು ಮತ್ತು ಕುಟುಂಬದವರಿಂದ ತಿಳಿದಿದ್ದೇನೆ. ಅವರು ಕರಾಚಿಗೆ ಹೋದಾಗ ನಾನಿನ್ನೂ ಹುಟ್ಟಿರಲಿಲ್ಲ. ನಾನು ಅಥವಾ ನನ್ನ ಕುಟುಂಬದವರು ಅವರೊಂದಿಗೆ ಸಂಪರ್ಕದಲ್ಲಿಲ್ಲ’ ಎಂದು ಅವರು ಇ.ಡಿಗೆ ತಿಳಿಸಿದ್ದಾರೆ. ‘ಆದರೆ ಈದ್, ದೀಪಾವಳಿ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ನನ್ನ ಪತ್ನಿ ಮತ್ತು ಸಹೋದರಿಯರ ಜತೆಗೆ ದಾವೂದ್ ಅವರ ಪತ್ನಿ ಸಂಪರ್ಕದಲ್ಲಿರುತ್ತಾರೆ’ ಎಂದು ಅಲಿಶಾ ಪಾರ್ಕರ್ ಹೇಳಿಕೆ ನೀಡಿದ್ದಾರೆ.
‘ದಾವೂದ್ ತನ್ನ ಜನರ ಮೂಲಕ ಹಣ ಕಳುಹಿಸುತ್ತಾರೆ ಎಂದು ಆತನ ಸಹೋದರ ಕಸ್ಕರ್ (ಇಕ್ಬಾಲ್)
ತಿಳಿಸಿರುವುದಾಗಿ ಮತ್ತೊಬ್ಬ ಸಾಕ್ಷಿದಾರ ಖಾಲಿದ್ ಉಸ್ಮಾನ್ ಶೇಖ್ ಹೇಳಿಕೆ ನೀಡಿದ್ದಾರೆ. ‘ಪ್ರತಿ ತಿಂಗಳು 10 ಲಕ್ಷವನ್ನು ತಾನು ಪಡೆಯುತ್ತಿರುವುದಾಗಿ ಕಸ್ಕರ್ ನನ್ನ ಬಳಿ ಹೇಳಿದ್ದಾರೆ. ಅಲ್ಲದೆ ಒಂದೆರಡು ಸಾರಿ ಅವರು ನನಗೆ ಆ ಹಣವನ್ನೂ ತೋರಿಸಿ, ಇದು ದಾವೂದ್ಭಾಯಿ ಅವರಿಂದ ಸ್ವೀಕರಿಸಿದ್ದು ಎಂದೂ ತಿಳಿಸಿದ್ದಾರೆ’ ಎಂದು ಹೇಳಿಕೆಯಲ್ಲಿ ದಾಖಲಿಸಿದ್ದಾರೆ.
ಮುಂಬಯಿ ಭೂಗತ ಲೋಕ, ದೇಶದಿಂದ ಪರಾರಿಯಾಗಿರುವ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 62 ವರ್ಷದ ನವಾಬ್ ಮಲಿಕ್ ಅವರನ್ನು ಫೆ.23 ರಂದು ಬಂಧನ ಮಾಡಲಾಗಿತ್ತು. ಈಗ ಜೈಲಿನಲ್ಲಿದ್ದಾರೆ.