ಮಹಿಳೆಗೆ ಗುದ್ದಿದ ಟಗರಿಗೆ ಎದುರಾಯ್ತು ಮೂರು ವರ್ಷ ಜೈಲು ವಾಸ !!

ಕೊಲೆ ಮಾಡುವುದು ಮಹಾಪರಾಧ. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಆದರೆ ಇದು ಪ್ರಾಣಿಗಳಿಗೂ ಕೂಡ ಅನ್ವಯವಾದಂತಿದೆ ಈ ಊರಲ್ಲಿ. ಹೌದು. ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಟಗರೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟಗರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆಯಂತೆ !!

ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬವರ ಮೇಲೆ ಟಗರು ದಾಳಿ ನಡೆಸಿದೆ. ʼರಾಮ್‌ʼ ಹೆಸರಿನ ಟಗರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಟಗರು, ಚಾಪಿಂಗ್‌ ಅವರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ.

ರುಂಬೆಕ್ ಪೂರ್ವದಲ್ಲಿನ ಅಕುಯೆಲ್ ಯೋಲ್ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ. ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯಲ್ಲಿ ಟಗರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಗರಿನ ಮಾಲೀಕ ನಿರಪರಾಧಿ. ಆದರೆ ಟಗರು ʼರಾಮ್‌ʼ ಅಪರಾಧವನ್ನು ಎಸಗಿದ ಕಾರಣ ಅದನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಮೂರು ವರ್ಷಗಳ ಕಾಲ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಶಿಬಿರದಲ್ಲಿ ಟಗರು ಸೆರೆವಾಸ ಕಳೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟಗರಿನ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್, ಸಂತ್ರಸ್ತೆ ಕುಟುಂಬಕ್ಕೆ ತಮ್ಮ ಐದು ಹಸುಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.

ಆದರೂ ಪ್ರಾಣಿಗೆ ಜೈಲು ಶಿಕ್ಷೆ ಎಂದರೆ ಅದು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?? ಅದನ್ನು ಕಟ್ಟಿ ಹಾಕಬಹುದೇ ಅಥವಾ ಸೆರೆಮನೆಯಲ್ಲಿರಿಸಬಹುದೇ.. ಹೇಗಿದ್ದರೂ ಪ್ರಾಣಿಗಳು ಯಾವಾಗಲೂ ಬಂಧಿಯಾಗಿಯೇ ಇರುವುದಲ್ಲವೇ ಎಂಬುದು ಕೊನೆಯಲ್ಲಿ ಉಳಿಯುವ ಪ್ರಶ್ನೆ.

Leave A Reply

Your email address will not be published.