ಬೆಳ್ಳಂಬೆಳಗ್ಗೆ ಮಂಜಿನ ನಗರಿ ಜನತೆಯನ್ನು ಕಾಡಿತು ಬಹು ದೊಡ್ಡ ಆತಂಕ !! | ಯಾರನ್ನೂ ರಸ್ತೆಗೆ ಇಳಿಯದಂತೆ ಮಾಡಿತೇ ಲಾರಿಯಿಂದ ಸೋರಿಕೆಯಾದ ಆ ಒಂದು ದ್ರವ !!?
ಇಂದು ಬೆಳ್ಳಂಬೆಳಗ್ಗೆ ಮಂಜಿನ ನಗರಿ ಆತಂಕದ ಕೂಪಕ್ಕೆ ತಳ್ಳಲ್ಪಟ್ಟಿತ್ತು. ರಸ್ತೆಗಿಳಿಯುವುಕ್ಕೆ ಹೆದರಿ ಜನ ಮನೆಯೊಳಗೆ ಕುಳಿತುಬಿಟ್ಟಿದ್ದರು, ರಸ್ತೆಗಿಳಿದವರು ಉಸಿರಾಡಲು ಪರದಾಡಿದರು. ಆ ಒಂದು ಲಾರಿ ಹೋದ ದಾರಿಯೆಲ್ಲಾ ವಿಷಮಯವಾಗಿತ್ತು. 60 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಉದ್ದಕ್ಕೂ ಸೋರಿಕೆಯಾದ ಆ ದ್ರವ ದೊಡ್ಡ ಅನಾಹುತವನ್ನೇ ಸೃಷ್ಟಿಸಿದ್ದಂತೂ ನಿಜ.
ಹೌದು. ನೆಮ್ಮದಿಯಾಗಿ ಉಸಿರಾಡುತ್ತಿದ್ದ ಕೊಡಗಿನ ಮಂದಿ ಇಂದು ಬೆಳಗ್ಗೆ ಒಂದು ದೊಡ್ಡ ಶಾಕ್‍ಗೆ ಒಳಗಾಗಿದ್ದರು. ಆ ಮಾರ್ಗದಲ್ಲಿ ಹಾದು ಹೋದ ಒಂದು ಲಾರಿಯಿಂದ 60 ಕಿಲೋ ಮೀಟರ್ ಉದ್ದಕ್ಕೂ ಕೆಂಪುಬಣ್ಣದ ದ್ರವ ಸೋರಿಕೆಯಾಗಿತ್ತು. ಆ ರಸ್ತೆಗೆ ಇಳಿದವರಿಗೆ ಉಸಿರಾಡಲು ಕೂಡ ಆಗಲಿಲ್ಲ. ಉಸಿರು ಎಳೆದುಕೊಂಡರೆ ಕೆಮ್ಮು, ಎದೆ ಉರಿ, ತಲೆನೋವು ಕಾಡಿತ್ತು. ಕಣ್ಣು ಬಿಟ್ಟರೆ ಉರಿ ಉರಿಯ ಅನುಭವವಾಗುತ್ತಿತ್ತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಶಾಲೆಗೆ ಹೋಗುವ 6 ಮಕ್ಕಳು ಅಸ್ವಸ್ಥರಾಗಿದ್ದರು.
ಕೊಡಗಿನ ಕುಶಾಲನಗರದಿಂದ ಸಿದ್ದಾಪುರ ಮಾರ್ಗವಾಗಿ ಕೇರಳ ಗಡಿಯ ಮಾಕುಟ್ಟ ಚೆಕ್‍ಪೋಸ್ಟ್ ಮೂಲಕ ಕೇರಳಕ್ಕೆ ಹೋಗುತ್ತಿದ್ದ ಲಾರಿಯಿಂದ ಸೋರಿಕೆಯಾದ ದ್ರವವೇ ಇಷ್ಟೊಂದು ಅನಾಹುತ ಸೃಷ್ಟಿಸಿದ್ದು. ಮೇಲ್ನೋಟಕ್ಕೆ ಮೆಣಸಿನಕಾಯಿ ಸಾಸ್ ಸೋರಿಕೆ ಅಂತ ಹೇಳಲಾಗುತ್ತಿದೆ. ಆದರೆ ಸಾಸ್ ಸೋರಿಕೆಯಿಂದ ಹೀಗಾಗುತ್ತಾ ಎಂಬ ಅನುಮಾನ ಮೂಡಿದ್ದು, ಈಗಾಗಲೇ ಲಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಲಾರಿಯಲ್ಲಿ ಇದ್ದ ದ್ರವವನ್ನು ಲ್ಯಾಬ್‍ಗೆ ಕಳುಹಿಸಿದ್ದಾರೆ.
ಸದ್ಯ ಅಸ್ವಸ್ಥಗೊಂಡಿರುವ ಸಿದ್ದಾಪುರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖುದ್ದು ಡಿಹೆಚ್‍ಓ ವೆಂಕಟೇಶ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯದ ತಪಾಸಣೆಯನ್ನು ಸ್ವತಃ ಅವರೇ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ದ್ರವ ಸೋರಿಕೆಯಾದ ಮಾರ್ಗದುದ್ದಕ್ಕೂ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡುತ್ತಿದ್ದು, ಆರೋಗ್ಯದಲ್ಲಿ ಏರುಪೇರಾದವರ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಯಾವ ಕೆಮಿಕಲ್ ಅಂತ ಹೇಳಬಹುದು ಎಂದು ತಿಳಿಸಿದ್ದಾರೆ.
ಸದ್ಯ ಮಾಕುಟ್ಟ ಚೆಕ್‍ಪೋಸ್ಟ್‌ನಲ್ಲಿ ದ್ರವ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ನಿಜಾಂಶ ಹೊರಬೀಳಲಿದೆ.