ಪೆಟ್ರೋಲ್ ಡೀಸೆಲ್ ಮತ್ತಷ್ಟು ಅಗ್ಗ ?! ರಾಜ್ಯ ಸುಂಕ ಇಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಸುಳಿವು
ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಲಿದೆ. ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ತಿಳಿಸಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ ಎಂಟು ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡುವ ಗುರಿ ಹೊಂದಿದೆ.
ಶನಿವಾರ ರಾತ್ರಿಯಿಂದ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸುಂಕವನ್ನು ಕಡಿತ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂಬ ಬಗ್ಗೆ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನವೆಂಬರ್ನಲ್ಲಿ ನಡೆಯಲಿರುವ ಇನ್ವೆಸ್ಟ್ ಮೆಂಟ್ ಕರ್ನಾಟಕ, ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಮುನ್ನ ಉತ್ಸಾಹದಾಯಕ ಬೆಳವಣಿಗೆಗಳಾಗಿದ್ದು,ವಭಾರತಕ್ಕೆ 2021-22ರಲ್ಲಿ ಅತಿಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿ ಕರ್ನಾಟಕವೇ ನಂಬರ್ ಒನ್ ಸ್ಥಾನದಲ್ಲಿ ಇರುವುದು ಸಂತಸದ ಸಂಗತಿ. ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ರಾಜ್ಯ ಮುಂಚೂಣಿ ಕಾಯ್ದುಕೊಂಡಿತ್ತು ಎಂದು ಸಿಎಂ ಬೊಮ್ಮಾಯಿಯವರು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ದೇಶ- ವಿದೇಶದ ಕಂಪನಿಗಳು, ಉದ್ಯಮಿಗಳ ಜೊತೆಗೆ ಯೋಜನೆಗಳ ಕುರಿತು ಪರಸ್ಪರ ಒಡಂಬಡಿಕೆ ಮಾತ್ರವಲ್ಲ, ಅನುಷ್ಠಾನವೂ ಆಗಲಿದೆ. ಹಲವು ಕೈಗಾರಿಕೆಗಳು ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಸರ್ಕಾರದ ಮುಂದಿದ್ದು, ದಾವೋಸ್ ಪ್ರವಾಸದಿಂದ ಮರಳಿದ ನಂತರ ಕಾರ್ಯರೂಪಕ್ಕೆ ತರಲು ಒತ್ತು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.