ನದಿಯಲ್ಲಿ ನಾಣ್ಯಗಳನ್ನು ಹಾಕುವುದು ಯಾಕೆ?? | ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದರಿಂದ ಏನು ಪ್ರಯೋಜನ ?? | ಇಲ್ಲಿದೆ ಇವುಗಳ ಹಿಂದಿರುವ ವಿಶೇಷ ಕಾರಣ

ಭಾರತ ಸಂಸ್ಕೃತಿ ಸಂಪ್ರದಾಯಗಳುಳ್ಳ ದೇಶ. ಇಲ್ಲಿ ಒಂದೊಂದು ಪ್ರದೇಶಕ್ಕೂ ಒಂದೊಂದು ರೀತಿಯ ನಂಬಿಕೆ, ಆಚಾರಗಳಿವೆ. ಈ ಸಂಪ್ರದಾಯಗಳೆಲ್ಲವೂ ಪುರಾತನ ಕಾಲದಿಂದ ಬಂದಿದೆಯಾದರೂ, ಕೆಲವೊಂದು ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಅದೆಷ್ಟೋ ಜನರಿಗೆ ತಾವು ಆಚರಿಸುತ್ತಿರುವ ಸಂಪ್ರದಾಯದ ಕುರಿತು ಯಾವುದೇ ಮಾಹಿತಿ ಅಥವಾ ಕಾರಣಗಳು ತಿಳಿದಿರುವುದಿಲ್ಲ.

ಸಾಮಾನ್ಯವಾಗಿ ನಾವೆಲ್ಲರೂ ಮನೆ ಬಾಗಿಲಿಗೆ ನಿಂಬೆಕಾಯಿ-ಮೆಣಸಿನಕಾಯಿ ಕಟ್ಟುವುದು, ನದಿಯ ಹತ್ತಿರ ಹೋದಾಗ ನಾಣ್ಯಗಳನ್ನು ಹಾಕುವುದನ್ನು ನೋಡಿರುತ್ತೇವೆ. ಅದರಲ್ಲೂ ಅದೆಷ್ಟೋ ಜನ ಈ ಪದ್ಧತಿಯನ್ನು ಪಾಲಿಸುತ್ತಿದ್ದೇವೆ. ಆದರೆ ಇದರ ಹಿಂದಿರುವಂತಹ ಕಾರಣಗಳು ಇಂದಿಗೂ ಕೆಲವರಿಗೆ ತಿಳಿದಿಲ್ಲ. ಹೀಗಾಗಿ ನಿಮಗೆ ಅರಿವಿಲ್ಲದ ಮಾಹಿತಿಯ ವಿವರ ನಾವು ತಿಳಿಸುತ್ತೇವೆ. ಈ ಸಂಪ್ರದಾಯದ ಹಿಂದಿರುವ ಪೌರಾಣಿಕ ಹಾಗೂ ವೈಜ್ಞಾನಿಕ ಕಾರಣದ ಕುರಿತು ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ.

ನದಿಯಲ್ಲಿ ನಾಣ್ಯಗಳನ್ನು ಹಾಕುವದರ ಹಿಂದಿರುವ ವಿಶೇಷ ಕಾರಣ:

ಈ ಪದ್ಧತಿಯ ಹಿಂದೆ ಒಂದು ಗುಪ್ತ ಕಾರಣವಿದೆ. ವಾಸ್ತವವಾಗಿ, ನದಿಯಲ್ಲಿ ನಾಣ್ಯಗಳನ್ನು ಹಾಕುವ ಈ ಪದ್ಧತಿ ಪ್ರಾರಂಭವಾದ ಸಮಯದಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ತಾಮ್ರವನ್ನು ನೀರಿನ ಶುದ್ಧೀಕರಣಕ್ಕಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಜನರು ನದಿ ಅಥವಾ ಯಾವುದೇ ಕೊಳದ ಸುತ್ತಲೂ ಹೋಗುವಾಗ, ಅವರು ಅದರಲ್ಲಿ ತಾಮ್ರದ ನಾಣ್ಯವನ್ನು ಹಾಕುತ್ತಿದ್ದರು.

ಆದರೆ ಜ್ಯೋತಿಷ್ಯದ ಪ್ರಕಾರ, ಜನರು ಯಾವುದೇ ರೀತಿಯ ದೋಷವನ್ನು ತೊಡೆದುಹಾಕಲು ಬಯಸಿದರೆ, ಅದಕ್ಕಾಗಿ ಅವರು ನೀರಿನಲ್ಲಿ ನಾಣ್ಯಗಳು ಮತ್ತು ಕೆಲವು ಪೂಜಾ ಸಾಮಗ್ರಿಗಳನ್ನು ಹರಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದರೊಂದಿಗೆ ಹರಿಯುವ ನೀರಿನಲ್ಲಿ ಬೆಳ್ಳಿಯ ನಾಣ್ಯವನ್ನು ಹಾಕಿದರೆ ದೋಷವು ಕೊನೆಗೊಳ್ಳುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದರ ಹಿಂದಿರುವ ಕಾರಣ:

ಮನೆ ಹಾಗೂ ಅಂಗಡಿಗಳ ಮುಂದೆ, ವಾಹನಕ್ಕೆ ನಿಂಬೆ ಹಣ್ಣು, ಮೆಣಸಿನಕಾಯಿಗಳನ್ನು ಕಟ್ಟುವುದು ಸಾಮಾನ್ಯ. ಬಹುತೇಕರು ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಗಳನ್ನು ದಾರಕ್ಕೆ ಪೋಣಿಸಿ ಕಟ್ಟಿರುತ್ತಾರೆ. ಆದರೆ ಅದಕ್ಕೆ ಕಾರಣವೇನು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ. ಇದೊಂದು ಸಂಪ್ರದಾಯವಾಗಿದ್ದು, ಪುರಾಣಗಳ ಪ್ರಕಾರ ಇದು ದರಿದ್ರ ಲಕ್ಷ್ಮಿಯನ್ನು ಮನೆ ಹಾಗೂ ಅಂಗಡಿಗಳಿಂದ ದೂರವಿಡಲು ಮಾಡುವ ಉಪಾಯ.

ನಮ್ಮಲ್ಲಿರುವ ದೇವತೆಗಳಲ್ಲಿ ಅದೃಷ್ಟ ಲಕ್ಷ್ಮಿ ಇರುವಂತೆ ದರಿದ್ರ ಲಕ್ಷ್ಮಿಯೂ ಇದ್ದಾಳೆ. ದರಿದ್ರ ಲಕ್ಷ್ಮಿಯನ್ನು ಅದೃಷ್ಟ ಲಕ್ಷ್ಮಿಯ ಸಹೋದರಿ ಎನ್ನುತ್ತಾರೆ. ಹೀಗೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು, ಎಲ್ಲರೂ ನಂಬಿದ್ದಾರೆ ಕೂಡ. ದರಿದ್ರ ಲಕ್ಷ್ಮಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಇಷ್ಟದ ಆಹಾರವಂತೆ. ದರಿದ್ರ ಲಕ್ಷ್ಮಿ ಮನೆ, ಅಂಗಡಿಗಳಿಗೆ ಪ್ರವೇಶಿಸಲು ಬಂದಾಗ ಬಾಗಿಲಿನಲ್ಲೇ ತನ್ನಿಷ್ಟದ ಆಹಾರವನ್ನು ಕಂಡು, ಅದನ್ನು ಸೇವಿಸುತ್ತಾಳಂತೆ. ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಸೇವಿಸಿದಾಗ ಆಕೆಗೆ ಕೋಪ ಕಡಿಮೆಯಾಗಿ ಆ ಸ್ಥಳವನ್ನು ಬಿಟ್ಟು ಹೋಗುತ್ತಾಳೆ. ಇದರಿಂದ ಬಡತನ, ಕಷ್ಟಗಳು ಸುಳಿಯುವುದಿಲ್ಲ ಎಂಬುದು ಬಲವಾದ ನಂಬಿಕೆ.

ವೈಜ್ಞಾನಿಕ ಕಾರಣವೇನು ಗೊತ್ತಾ?

ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಹತ್ತಿಯ ದಾರಕ್ಕೆ ಕಟ್ಟಿ ನೇತು ಹಾಕಿದಾಗ, ಆ ದಾರವು ನಿಂಬೆ ಹಣ್ಣು ಹಾಗೂ ಮೆಣಸಿನ ಕಾಯಿಯಲ್ಲಿರುವ ರಸವನ್ನು ಹೀರಿಕೊಳ್ಳುತ್ತದೆ. ಇವೆರೆಡರ ವಾಸನೆಗೆ ಕ್ರಿಮಿ, ಕೀಟಗಳು ಸಾಯುತ್ತವೆ. ಹೀಗಾಗಿ ಮನೆ, ಅಂಗಡಿಗಳಲ್ಲಿ ಸುರಕ್ಷಿತವಾಗಿರಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ, ವಾಹನಗಳಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಕಟ್ಟಲು ಸಹ ಕಾರಣವಿದ್ದು, ಇದು ದೃಷ್ಟಿಯಾಗದಂತೆ ತಡೆಯುತ್ತವೆ ಎನ್ನುವುದು ಜನರ ನಂಬಿಕೆಯಾಗಿದೆ.

Leave A Reply

Your email address will not be published.