ಮಂಗಳೂರು : SSLC ಪರೀಕ್ಷೆ, ಮಗಳ ಜೊತೆ ಅಮ್ಮ ಕೂಡಾ ಪಾಸ್ !

ಮಂಗಳೂರು : ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ತಾಯಿ ಮಗಳಿಬ್ಬರೂ ತೇರ್ಗಡೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಕನ್ನಡ ಮಾಧ್ಯಮದಲ್ಲಿ ಮತ್ತು ಅವರ ಪುತ್ರಿ ಖುಷಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

 

21 ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಕಲಿಯುವ ಅವಕಾಶದಿಂದ ಹಿಂದೆ ಸರಿದ ಮಮತಾ ರಮೇಶ್ ಕಳೆದ ಮೂರು ವರ್ಷಗಳ ಹಿಂದೆ ಪರೀಕ್ಷೆ ಬರೆದರೂ ಪಾಸಾಗಿರಲಿಲ್ಲ. ಆದರೆ ಈ‌ ಬಾರಿ ಪಾರಾಗಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಲು ಎಸ್ ಎಸ್‌ಎಲ್‌ಸಿ ವಿದ್ಯಾರ್ಹತೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಮನಸ್ಸು ಮಾಡಿ ಪರೀಕ್ಷೆ ಬರೆಯಲು ಮುಂದಾದರು.

ಸ್ಥಳೀಯ ಜೈ ಹನುಮಾನ್ ಕ್ರೀಡಾ ಸಂಘಟನೆಯ ಕಾರ್ಯಕರ್ತೆ, ಕುತ್ತಾರ್ ಲಚ್ಚಿಲ್ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಮಮತಾ ಅವರಿಗೆ ಬಬ್ಬುಕಟ್ಟೆಯ ಹೀರಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಂಶುಪಾಲರಾದ ಭಾಗೀರಥಿ ಅವರ ಪರಿಚಯವಾಗಿತ್ತು. ಅವರ ನಿರ್ದೇಶನದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿದ ಮಮತಾ ಅವರಿಗೆ ಡಿಸೆಂಬರ್ ತಿಂಗಳಿನಿಂದ ಹಿಡಿದು ಪರೀಕ್ಷೆ ಮುಗಿಸುವವರೆಗೂ ಭಾಗೀರಥಿ ಅವರು ತಮ್ಮ ಮನೆಯಲ್ಲೇ ಉಚಿತವಾಗಿ ತರಬೇತಿಯನ್ನು ನೀಡಿದ್ದಾರೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಪರೀಕ್ಷೆಯನ್ನು ಕಟ್ಟಿದ್ದ ಮಮತಾ ಅವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪುತ್ರಿ ಖುಷಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

Leave A Reply

Your email address will not be published.